Menu

ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಮದ್ಯದಂಗಡಿ ಮುಚ್ಚಲು ತಮಿಳುನಾಡು ಸಿಎಂ ವಿಜಯ್‌ ಆದೇಶ

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ರಾಜ್ಯದ ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಇರುವ 717 ಟಾಸ್ಮ್ಯಾಕ್ ಮದ್ಯದಂಗಡಿಗಳನ್ನು ತಕ್ಷಣ ಮುಚ್ಚುವಂತೆ ಆದೇಶಿಸಿದ್ದಾರೆ.

ಮುಂದಿನ ಎರಡು ವಾರಗಳೊಳಗೆ ಈ ಎಲ್ಲ ಅಂಗಡಿಗಳಿಗೆ ಬೀಗ ಹಾಕುವಂತೆ ಸಿಎಂ ವಿಜಯ್ ಖಡಕ್ ಆಗಿ ಸೂಚಿಸಿದ್ದಾರೆ. ಈ ಬಗ್ಗೆ ತಮಿಳುನಾಡು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ರಾಜ್ಯದಲ್ಲಿ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮವು ಒಟ್ಟು 4,765 ಮದ್ಯದ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ.

ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವಿಜಯ್ 200 ಯೂನಿಟ್ ಉಚಿತ ವಿದ್ಯುತ್, ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ, ಮಾದಕವಸ್ತು ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಮೂರು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದರು.

ಮುಖ್ಯಮಂತ್ರಿ ಎಸ್. ಜೋಸೆಫ್ ವಿಜಯ್ ಆದೇಶದಂತೆ, ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗಿತ್ತು. 717 ಮದ್ಯದಂಗಡಿಗಳು ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಈ ಅಂಗಡಿಗಳನ್ನು ಮುಚ್ಚಲು ಆದೇಶವಿದೆ. 717 ಅಂಗಡಿಗಳಲ್ಲಿ 276 ದೇವಸ್ಥಾನಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಇವೆ ಎಂದು ಸರ್ಕಾರಿ ಪ್ರಕಟಣೆ  ತಿಳಿಸಿದೆ.

Related Posts

Leave a Reply

Your email address will not be published. Required fields are marked *