ಬೆಂಗಳೂರಿನ ಟೆಕ್ಕಿ ದಂಪತಿ ಶ್ರೀಲಂಕಾದಿಂದ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿದ್ದಾರೆ. ಐಟಿ ಉದ್ಯಮಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ದಾಖಲೆ ಸೃಷ್ಟಿಸಿದ್ದಾರೆ.
ಶ್ರೀಲಂಕಾದಿಂದ ರಾಮ ಸೇತು ಮಾರ್ಗದ ಮೂಲಕ 11 ಗಂಟೆ ಈಜಿಕೊಂಡು ಭಾರತ ತಲುಪಿದ್ದು, ಈಜಿಕೊಂಡು ಬರುವ ಕೆಲವು ಕ್ಲಿಪ್ಗಳನ್ನು ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವೇಗದ ಗಾಳಿ ಹಾಗೂ ಅಲೆಗಳ ತೀವ್ರ ಏರಿಳಿತದ ವಿರುದ್ಧ ಸೆಣಸಾಡಿ ಭಾರತದ ದಡ ಸೇರಿರುವುದಾಗಿ ಹೇಳಿಕೊಂಡಿದ್ದಾರೆ.
ಮೇ 7ರಂದು ಬೆಳಿಗ್ಗೆ 4:30ಕ್ಕೆ ಶ್ರೀಲಂಕಾದ ತಲೈಮನ್ನಾರ್ನಿಂದ ಹೊರಟ ದಂಪತಿ ರಾಮ ಸೇತು ಮಾರ್ಗವಾಗಿ 32 ಕಿ.ಮೀ ಈಜಿಕೊಂಡು ಮಧ್ಯಾಹ್ನ 3:15ಕ್ಕೆ ತಮಿಳುನಾಡಿನ ಧನುಷ್ಕೋಡಿಯನ್ನು ತಲುಪಿದ್ದಾರೆ. ಒಟ್ಟು 10 ಗಂಟೆ 45 ನಿಮಿಷ ರಾಮ ಸೇತು ಮಾರ್ಗದಲ್ಲಿ ಈಜುತ್ತ ಶ್ರೀಲಂಕಾದಿಂದ ಭಾರತಕ್ಕೆ ಬಂದ ಮೊದಲ ದಂಪತಿ ಎಂಬ ದಾಖಲೆ ಇವರದಾಗಿದೆ.
ಈಜಿಕೊಂಡು ಬರುವ ಸಮಯದಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಮೇಲ್ವಿಚಾರಣೆ ನಡೆಸಲಾಗಿದೆ. ಈಜುಗಾರರೊಂದಿಗೆ ದೋಣಿಗಳು, ಅರೆವೈದ್ಯರು ಹಾಗೂ ಭಾರತೀಯ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಇದ್ದರು. ದಂಪತಿಯ ಈ ವಿಶೇಷ ಸಾಧನೆಗೆ ಆನ್ಲೈನ್ನಲ್ಲಿ ಪ್ರಶಂಶೆ, ದಂಪತಿಯ ಸಹನೆ, ಶಿಸ್ತು ಮತ್ತು ತಂಡದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ನಾಲ್ಕು ವರ್ಷಗಳ ಹಿಂದೆ ಈಜು ಕಲಿತಿದ್ದ ದಂಪತಿ ಇಂಥ ಸಾಧನೆ ಮಾಡಿರುವುದು ಗಮನಾರ್ಹ.


