Menu

ಗಂಡ, ಮಕ್ಕಳ ತೊರೆದಿದ್ದ ಮಹಿಳೆ ಜೊತೆ ಲಿವ್-ಇನ್ ರಿಲೇಷನ್‌ಶಿಪ್‌: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಬೆಂಗಳೂರಿನ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಯುವಕನ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಚಿತ್ರದುರ್ಗದ ತಿಪ್ಪೇಸ್ವಾಮಿ (28) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರಿನ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದಾವಣಗೆರೆಯ ಮಹಿಳೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಇಬ್ಬರೂ ಒಂದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತ ಕಳೆದ ಎರಡು ತಿಂಗಳಿನಿಂದ ಲಿವ್-ಇನ್ ಸಂಬಂಧದಲ್ಲಿದ್ದು, ಶ್ರೀಗಂಧನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು.

ಮಹಿಳೆ ಪತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ತಿಪ್ಪೇಸ್ವಾಮಿ ಜೊತೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ಮನೆ ಮಾಲೀಕರಿಗೆ ನಾವಿಬ್ಬರೂ ಗಂಡ-ಹೆಂಡತಿ ಎಂದು ಹೇಳಿ ತಿಂಗಳಿಗೆ ಮೂರು ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದರು.

ಕೆಲವು ದಿನಗಳಿಂದ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ನನ್ನನ್ನು ಬಿಟ್ಟುಬಿಡು ಎಂದು ಮಹಿಳೆ ಕಿರುಕುಳ ನೀಡುತ್ತಿದ್ದಳು ಎಂಬ ಆರೋಪ ಕೇಳಿಬಂದಿದೆ. ನೊಂದ ತಿಪ್ಪೇಸ್ವಾಮಿ ಆತ್ಮ*ಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ತಿಪ್ಪೇಸ್ವಾಮಿ ಸಾವಿಗೆ ಮಹಿಳೆ ಪ್ರಿಯಾಂಕಾ ಕಾರಣ ಎಂದು ಮೃತನ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನಾಪತ್ತೆಯಾಗಿರುವ ಮಹಿಳೆಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *