ಯೂರೋಪ್ ಕಡೆಗೆ ಸಾಗುತ್ತಿದ್ದ ಐಷಾರಾಮಿ ಹಡಗೊಂದರಲ್ಲಿ ಹಂಟಾ ವೈರಸ್ ಕಾಣಿಸಿಕೊಂಡಿದ್ದು, ಒಬ್ಬ ಭಾರತೀಯ ಸೇರಿದಂತೆ ಮೂವರನ್ನು ಬಲಿ ಪಡೆದಿದೆ ಎನ್ನಲಾಗಿದೆ. ದಕ್ಷಿಣ ಅಮೆರಿಕದಿಂದ ಯೂರೋಪ್ ಕಡೆಗೆ ಸಂಚರಿಸುತ್ತಿದ್ದ ‘ಎಂವಿ ಹೊಂಡುಯಸ್’ ಎಂಬ ಪ್ರವಾಸಿ ಹಡಗಿನಲ್ಲಿ ಈ ದುರಂತ ನಡೆದಿದೆ.
ಹಡಗಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಯೂರೋಪ್ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಅಸು ನೀಗಿದ್ದಾರೆ. ಪತ್ನಿಗೂ ಅದೇ ಲಕ್ಷಣಗಳು ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರೂ ಮೃತಪಟ್ಟಿದ್ದಾರೆ. ಹಡಗಿನಲ್ಲಿದ್ದ ಭಾರತೀಯ ಮೂಲದ ಸಿಬ್ಬಂದಿ ಕೂಡ ವೈರಸ್‌ಗೆ ಬಲಿಯಾಗಿರುವುದು ವರದಿಯಾಗಿದೆ.
ಮೃತರ ರಕ್ತದ ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ, ಅದು ಅಪಾಯಕಾರಿ ಹಂಟಾ ವೈರಸ್ ಎಂದು ದೃಢಪಟ್ಟಿದೆ. ಯೂರೋಪ್‌ನ ಆರೋಗ್ಯ ಇಲಾಖೆ, ಹಡಗಿನಲ್ಲಿದ್ದ ಉಳಿದ ಪ್ರಯಾಣಿಕರ ಪತ್ತೆಗೆ ಮತ್ತು ಅವರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಂಡಿದೆ.
ಸಾಮಾನ್ಯವಾಗಿ ಇಲಿ ಮತ್ತು ಹೆಗ್ಗಣಗಳ ಲಾಲಾರಸ, ಮೂತ್ರ ಅಥವಾ ಮಲದ ಸಂಪರ್ಕದಿಂದ ಈ ವೈರಸ್ ಮನುಷ್ಯರಿಗೆ ಹರಡುತ್ತದೆ. ತೀವ್ರ ಜ್ವರ, ಸ್ನಾಯು ನೋವು, ವಿಪರೀತ ಸುಸ್ತು, ತಲೆನೋವು, ವಾಂತಿ ಮತ್ತು ಭೇದಿ ಆಗುತ್ತದೆ. ರೋಗ ಉಲ್ಬಣಗೊಂಡಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಉಸಿರಾಡಲು ಸಾಧ್ಯವಾಗದೆ ಸಾಯುತ್ತಾರೆ.
ಈ ಹಿಂದೆ ತಮಿಳುನಾಡು ಮತ್ತು ಮುಂಬೈನ ಕೆಲವು ಭಾಗಗಳಲ್ಲಿ ಇದು ಕಾಣಿಸಿಕೊಂಡಿತ್ತು. ಆದರೆ ಪ್ರಾಣಾಪಾಯ ಉಂಟು ಮಾಡಿರಲಿಲ್ಲ. ಇಂಥ ವೈರಸ್‌ಗಳು ಮತ್ತೆ ಕಾಣಿಸಿಕೊಳ್ಳುತ್ತಿರುವುದು ಜಗತ್ತಿನ ಆರೋಗ್ಯ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸುತ್ತಿದೆ.


