ಯಾದಗಿರಿ ಜಿಲ್ಲೆಯ ಗುರುಮಠಕಲ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿ ಒಂದು ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕ್ರಿಮಿನಲ್ ಪ್ರಕರಣದ ಆರೋಪಿಗಳನ್ನು ಬಂಧಿಸದಿರಲು ಮತ್ತು ಪ್ರಕರಣದಿಂದ ಕೈಬಿಡಲು ಹಣಕ್ಕೆ ಬೇಡಿಕೆಯಿಟ್ಟಿದ್ದು, ಅದನ್ನು ಪಡೆಯುವಾಗ ಲೋಕಾಯುಕ್ತ ತಂಡ ದಾಳಿ ನಡೆಸಿದೆ.
ಲೋಕಾಯುಕ್ತ ಡಿವೈಎಸ್‌ಪಿ ಜಾಕೀರ್ ಇನಾಂದಾರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದ ಆನಂದ್ ಎಂಬವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನಲ್ಲಿ ಅವರನ್ನು ಬಂಧಿಸದೆ ಇರಲು ಮತ್ತು ಇನ್ನೊಂದು ಕೇಸ್‌ನಲ್ಲಿ ಹೆಸರನ್ನು ಕೈಬಿಡಲು ಪಿಐ ವೀರಣ್ಣ ದೊಡ್ಡಮನಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆನಂದ್ ದೂರು ನೀಡಿದ್ದಾರೆ. ಎರಡು ಪ್ರಕರಣಗಳ ಇತ್ಯರ್ಥಕ್ಕಾಗಿನ ಒಂದು ಲಕ್ಷ ರೂಪಾಯಿ ಹಣ ಪಡೆಯುವ ಒಪ್ಪಂದವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗುರುಮಠಕಲ್‌ನ ಪೊಲೀಸ್ ವಸತಿ ಗೃಹದಲ್ಲಿ ಆನಂದ್ ಅವರಿಂದ ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದಾರೆ. ಲಂಚದ ಹಣದೊಂದಿಗೆ ಇನ್ಸ್‌ಪೆಕ್ಟರ್ ವೀರಣ್ಣ ಬಲೆಗೆ ಬೀಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಜಾಕೀರ್ ಇನಾಂದಾರ್ ಅವರ ನೇತೃತ್ವದ ತಂಡ ಈ ದಾಳಿಯನ್ನು ನಡೆಸಿದೆ. ಆರೋಪಿ ಇನ್ಸ್‌ಪೆಕ್ಟರ್ ವೀರಣ್ಣ ದೊಡ್ಡಮನಿಯನ್ನು ವಶಕ್ಕೆ ಪಡೆಯಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


