Menu

ನಟ ಡಾ. ರಾಜ್ ಕುಮಾರ್ ಸಮಾಧಿಗೆ ಜಮೀನು: ಹೇಳಿಕೆ ಸುಳ್ಳಾಗಲ್ಲವೆಂದ ನಟ ಚೇತನ್‌

ನಟ ಡಾ. ರಾಜ್ ಕುಮಾರ್ ಸಮಾಧಿ ಸ್ಮಾರಕಕ್ಕಾಗಿ ರಾಜ್ಯ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿರುವ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ನಟ ಚೇತನ್ ಅಹಿಂಸಾ, ಆ ಹೇಳಿಕೆಗೆ ಈಗಲೂ ಬದ್ಧ, ನಾನು ಕ್ಷಮೆ ಕೇಳಿದರೂ ಹೇಳಿಕೆ ಸುಳ್ಳಾಗಲ್ಲ ಎಂದಿದ್ದಾರೆ.

ರಾಜ್ ಕುಮಾರ್ ಸ್ಮಾರಕಕ್ಕಾಗಿ ರಾಜ್ಯ ಸರ್ಕಾರ ಎರಡೂವರೆ ಎಕರೆ ಜಾಗ ನೀಡಿರುವ ವಿಚಾರಕ್ಕೆ ನಟ ಚೇತನ್ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ತೀವ್ರ ವಿವಾದವುಂಟಾಗಿದೆ. ಚೇತನ್ ಹೇಳಿಕೆಗಳನ್ನು ಪ್ರತಿಭಟಿಸಿ ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನಟ ಚೇತನ್, ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನಾನು ಹೇಳಿದ ವಿಚಾರದಲ್ಲಿ ಸತ್ಯವಿದೆ. ನನ್ನ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಾನು ಒಪ್ಪುವುದಿಲ್ಲ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ವಿಷಾದ ವ್ಯಕ್ತಪಡಿಸಿದ ಮಾತ್ರಕ್ಕೆ ನಾನು ಹೇಳಿದ ವಿಚಾರ ಸುಳ್ಳಾಗಲ್ಲ ಎಂದು ಹೇಳಿದ್ದಾರೆ.

ರಾಜ್ ಅಭಿಮಾನಿಗಳು ಮತ್ತು ಕನ್ನಡಪರ ಹೋರಾಟಗಾರರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ಹಿನ್ನೆಲೆ, ಚೇತನ್ ತಮ್ಮ ನಿಲುವನ್ನು ಮತ್ತಷ್ಟು ಸ್ಪಷ್ಟಪಡಿಸಿದ್ದಾರೆ. ವಿಷಾದ ವ್ಯಕ್ತಪಡಿಸಿದ್ದೇನೆ, ಆದರೆ ನಾನು ಹೇಳಿದ್ದು ಸುಳ್ಳಲ್ಲ. ಈಗಲೂ ನಾನು ನನ್ನ ಹೇಳಿಕೆಗೆ ಬದ್ಧನಾಗಿದ್ದೇನೆ. ಒಂದು ವೇಳೆ ನನ್ನ ಹೇಳಿಕೆಯಿಂದ ಧಕ್ಕೆ ತಂದಿದ್ದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಿ. ಅದನ್ನು ಎದುರಿಸಲು ನಾನು ಸಿದ್ಧ ಎಂದು ತಿಳಿಸಿದ್ದಾರೆ.

ರಾಜ್ ಕುಮಾರ್ ಬದುಕಿದ್ದಾಗ ಎರಡೂವರೆ ಎಕರೆ ಜಾಗವನ್ನು ನಿಮ್ಮ ಸ್ಮಾರಕಕ್ಕೆ ನೀಡುತ್ತೇವೆ ಎಂದಿದ್ದರೆ, ಅವರೇ ಬೇಡ ಎನ್ನುತ್ತಿದ್ದರು. ಅಂತಹ ಮೇರು ವ್ಯಕ್ತಿ ಅವರು. ಅವರಿಗೆ ಸ್ಟಾರ್ ಸಂಸ್ಕೃತಿ ಇಷ್ಟವಿರಲಿಲ್ಲ. ನಾನು ಪ್ರಚಾರಕ್ಕೋಸ್ಕರ ಈ ರೀತಿ ಹೇಳಿಲ್ಲ. ಇದು ವಿಚಾರಕ್ಕೋಸ್ಕರ ಮಾತ್ರ  ಎಂದಿದ್ದಾರೆ.

ಅಣ್ಣಾವ್ರ ಕುಟುಂಬದ ಬಗ್ಗೆ ಯಾವುದೇ ತಕರಾರು ಇಲ್ಲ. ಅವರ ಅಭಿಮಾನಿ ಬಳಗದ ಬಗ್ಗೆಯೂ ತಕರಾರು ಇಲ್ಲ. ಸರ್ಕಾರದ ಯೋಜನೆಗಳಲ್ಲಿ ಒಬ್ಬರಿಗೆ ಜಾಗ ಕೊಟ್ಟು, ಇನ್ನುಳಿದವರಿಗೆ ಕೊಟ್ಟಿಲ್ಲ ಎಂದರೆ ಚಿತ್ರರಂಗದಲ್ಲಿ ಸಮಸ್ಯೆಗಳು ಆಗುತ್ತವೆ. ಇರುವ ಸಮಸ್ಯೆಗೆ ಪರಿಹಾರ ಸಿಗದು. ನಾನು ಸ್ಟಾರ್ ಸಂಸ್ಕೃತಿಯನ್ನು ವಿರೋಧಿಸುತ್ತೇನೆ ಎಂದರು.

ತಮ್ಮ ಮೇಲೆ ಒತ್ತಡ ತರಲಾಗುತ್ತಿದೆ ಎಂದು ಚೇತನ್ ಆರೋಪಿಸಿದ್ದಾರೆ. ಸೌಜನ್ಯದಿಂದ ಮಾತನಾಡಿದರೆ ಮಾತ್ರ ನಾನು ಬದ್ಧನಾಗಿರುತ್ತೇನೆ. ಆದರೆ ಗೂಂಡಾ ವರ್ತನೆ ಮಾಡಿದರೆ, ಮಹಿಳೆ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದರೆ ಅದಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಪೊಲೀಸರು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕುಎಂದು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *