ಸೂರತ್ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಕೊಲೆ ಮಾಡಿ ಆಕೆಯ ಮೃತದೇಹವನ್ನು ಮರದ ಪೆಟ್ಟಿಗೆಯಲ್ಲಿ ಅಡಗಿಸಿ ನಾಪತ್ತೆಯಾಗಿದ್ದಾಳೆ ಎಂದು ನಾಟಕವಾಡಿದ್ದು, ತನಿಖೆ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
40 ವರ್ಷದ ವಿಶಾಲ್ ಸಾಲ್ವಿ ಎಂಬಾತ ಪತ್ನಿ ಶಿಲ್ಪಾ ಸಾಲ್ವಿ (39)ಯನ್ನು ಹತ್ಯೆ ಮಾಡಿ ಶವವನ್ನು ಮನೆಯಲ್ಲೇ ಇದ್ದ ಮರದ ಪೆಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದ. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಲ್ಲಿ ದೂರು ದಾಖಲಿಸಿದ್ದ. ತನಿಖೆ ನಡೆಸಿದ ಪೊಲೀಸರು ಆತನ ಕೃತ್ಯವನ್ನು ಬಯಲಿಗೆಳೆದು ಜೈಲಿಗೆ ಅಟ್ಟಿದ್ದಾರೆ.
ಶಿಲ್ಪಾ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದಾಗಿ ಪತಿ ವಿಶಾಲ್ ಸಾಲ್ವಿ ನಾಪತ್ತೆ ದೂರು ದಾಖಲಿಸಿದ್ದರು. ನನ್ನ ಪತ್ನಿ ಮನೆಬಿಟ್ಟು ಹೋಗಿದ್ದಾಳೆ. ಹೋಗುವ ಮುನ್ನ ಅವಳು ಪತ್ರ ಬರೆದಿಟ್ಟಿದ್ದಾಳೆ” ಎಂದು ವಿಶಾಲ್ ಪೊಲೀಸರಿಗೆ ತಿಳಿಸಿದ್ದ. ಆದರೆ ಆ ಪತ್ರದಲ್ಲಿನ ಬರವಣಿಗೆ ವಿಶಾಲ್ ಕೈಬರಹಕ್ಕೆ ಹೋಲಿಕೆಯಾಗಿತ್ತು. ಈ ಅನುಮಾನದ ಹಿನ್ನೆಲೆ ಪೊಲೀಸರು ವಿಶಾಲ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಸತ್ಯ ಹೊರ ಬಂದಿದೆ.
ಪತ್ನಿ ಶಿಲ್ಪಾ ಅವರನ್ನು ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿಯು ಶವವನ್ನು ಮನೆಯೊಳಗಿನ ನಿರ್ಜನ ಪ್ರದೇಶದಲ್ಲಿದ್ದ ಮರದ ಪೆಟ್ಟಿಗೆಯಲ್ಲಿ ಅಡಗಿಸಿಟ್ಟ ಸ್ಥಳ ತೋರಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮರದ ಪೆಟ್ಟಿಗೆಯಿಂದ ಶಿಲ್ಪಾ ಅವರ ಶವ ಹೊರ ತೆಗೆದಿದ್ದಾರೆ.
ಶಿಲ್ಪಾ ಸಾಲ್ವಿ ಡಯಟೀಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಆರೋಗ್ಯಕರ ಜೀವನಶೈಲಿ ಮತ್ತು ಪೌಷ್ಟಿಕ ಆಹಾರ ಕುರಿತು ಜನರಿಗೆ ಮಾರ್ಗದರ್ಶನ ನೀಡುತ್ತಿದ್ದರು. ವಿಶಾಲ್ ಸಾಲ್ವಿ ವಿರುದ್ಧ ಸೂರತ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


