ಮದುವೆಯಾಗುವುದಾಗಿ ನಂಬಿಸಿ ಲಂಡನ್‌ನಲ್ಲಿರುವ ಸಾಫ್ಟ್‌ವೇರ್ ಇಂಜಿನಿಯರ್‌ಗೆ 9.35 ಕೋಟಿ ರೂಪಾಯಿ ವಂಚಿಸಿದ ಆರೋಪದಡಿ ನಟಿ, ತೆಲುಗು ಬಿಗ್ಬಾಸ್ ಸ್ಪರ್ಧಿ ವಿರುದ್ಧ ಪ್ರಕರಣ ದಾಖಲಾಗಿದೆ. ಲಂಡನ್ ಮೂಲದ ವಿಚ್ಚೇದಿತ ಟೆಕ್ಕಿ ಧರ್ಮೇಂದ್ರ ಎಂಬವರ ತಂದೆ ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ದೂರು ನೀಡಿದ್ದು, ನಟಿ ಹಾಗೂ ಆಕೆಯ ಕುಟುಂಬದ ಮೂವರ ವಿರುದ್ಧ ಕೇಂದ್ರ ಅಪರಾಧ ದಳದ ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಸಂತ್ರಸ್ತ ಸಾಫ್ಟ್‌ವೇರ್ ಇಂಜಿನಿಯರ್‌ಗೆ 2018ರಲ್ಲಿ ಹೈದರಾಬಾದ್‌ನಲ್ಲಿ ಸಾಮಾನ್ಯ ಸ್ನೇಹಿತನ ಮೂಲಕ ಈ ನಟಿ ಆಶು ರೆಡ್ಡಿಯ ಪರಿಚಯವಾಗಿತ್ತು. ಕುಟುಂಬದ ಕಾರ್ಯಕ್ರಮಕ್ಕೆ ಹೈದರಾಬಾದ್‌ಗೆ ಬಂದಿದ್ದಾಗ ತಾನು ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿರುವುದಾಗಿ ನಟಿ ಹೇಳಿಕೊಂಡಿದ್ದಳು. ಭೇಟಿಯ ಬಳಿಕ ಎರಡು ತಿಂಗಳಲ್ಲಿ ಇಬ್ಬರು ಸ್ನೇಹಿತರಾಗಿದ್ದು ಆತ್ಮೀಯತೆ ಬೆಳೆದಿದೆ. ನಟಿ ತಾನು ನಿಮ್ಮನ್ನು ಮದುವೆಯಾಗುವುದಾಗಿ ಇಂಜಿನಿಯರ್‌ಗೆ ಭರವಸೆ ನೀಡಿದ್ದಾಳೆ. ಆತ ತಾನು ವಿಚ್ಚೇದಿತ ಎಂದು ಹೇಳಿದಾಗ, ಅದೇನು ಸಮಸ್ಯೆಯಲ್ಲ ಎಂದಿದ್ದಳು.
ನಂತರ ಹೆಚ್-1ಬಿ ವೀಸಾ ಸಮಸ್ಯೆ ಇದೆ, ಶಿಕ್ಷಣ ಸಾಲ, ತಂದೆ ಹಣ ನೀಡುವುದು ನಿಲ್ಲಿಸಿದ್ದಾರೆ, ಸಿನಿಮಾದಲ್ಲಿ ತನ್ನ ವೃತ್ತಿ ಜೀವನ ನಡೆಸುವುದಕ್ಕೆ ಬಯಸುತ್ತಿದ್ದೇನೆ ಇವೇ ಮೊದಲಾದ ಕಾರಣಗಳನ್ನು ಹೇಳಿ ಹಣ ಪಡೆದುಕೊಂಡಿದ್ದಳು. ಬಳಿಕ ಫ್ಲಾಟ್, ಚಿನ್ನ, ಕಾರು ಇತ್ಯಾದಿ ಖರೀದಿಗಳಿಗೂ ಇಂಜಿನಿಯರ್ ಹಣ ನೀಡುತ್ತಾ ಹೋಗಿದ್ದಾರೆ. ಆಕೆಯ ಕುಟುಂಬದವರು ಕೂಡ ಹಣ ಪಡೆದಿದ್ದಾರೆ. ಆಕೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರಿಂದ ಹಾಗೆ ಮಾಡಿದೆ ಎಂದು ಸಂತ್ರಸ್ತ ಟೆಕ್ಕಿ ಹೇಳಿದ್ದಾರೆ.
ಮದುವೆಯ ವಿಚಾರ ಹೇಳಿದಾಗ ಆಕೆ ಮತ್ತಷ್ಟು ಸಮಯ ಬೇಕು ಎಂದು ನೆಪ ಹೇಳಿ ಮುಂದೂಡುತ್ತಲೇ ಇದ್ದಳು. ಜುಲೈ 2020 ರಲ್ಲಿ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆಸುವಂತೆ ಟೆಕ್ಕಿ ಒತ್ತಾಯಿಸಿದಾಗ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದಳು. ಆಘಾತಕ್ಕೊಳಗಾದ ಟೆಕ್ಕಿ ತಾನು ಇದುವರೆಗೆ ನೀಡಿದ ಹಣ ವಾಪಸ್ ಕೊಡುವಂತೆ ಕೇಳಿದಾಗ ಇವರಿಬ್ಬರ ಮಧ್ಯೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ತೆಲುಗಿನ ಪ್ರಮುಖ ಕಲಾವಿದೆಯ ಒತ್ತಾಯದ ಬಳಿಕ ಆರೋಪಿ ನಟಿ 70 ಲಕ್ಷ ರೂ. ಪಾವತಿಸಲು ಒಪ್ಪಿಕೊಂಡಳು. ಆದರೆ ಆಕೆಹಣ ನೀಡಿಲ್ಲ. 2020 ರಲ್ಲಿ ನಟಿಯ ಕುಟುಂಬವು ತನ್ನನ್ನು ಸಂಪರ್ಕಿಸಿ ಆಕೆ ಖಿನ್ನತೆಗೆ ಒಳಗಾಗಿದ್ದಾಳೆ. ಆಕೆಯೊಂದಿಗೆ ಸಂಬಂಧ ಮುಂದುವರಿಸುವಂತೆ ನನ್ನ ಒತ್ತಾಯಿಸಿದರು ಎಂದು ಹೇಳಿದ್ದಾರೆ.
ಟೆಕ್ಕಿ ಆಕೆಯನ್ನು ಮದುವೆಯಾಗಲು ನಿರ್ಧರಿಸಿ. 2023ರಲ್ಲಿ ಈ ವಿಚಾರವಾಗಿ ಆಕೆಯ ತಂದೆಯನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿತ್ತು. ಜುಲೈ 2025ರಲ್ಲಿ ಆಕೆ ಮತ್ತೆ ಮದುವೆಯಾಗುವುದಿಲ್ಲ ಎಂದಳು. ಕೆಲವು ಸಮಯದ ನಂತರ ಆ ನಟಿ ಬೇರೆಯವರ ಜೊತೆ ಸಂಬಂಧ ಹೊಂದಿರುವುದು ಹಾಗೂ ಹಣ ಸುಲಿಗೆಗಾಗಿ ತನ್ನನ್ನು ಬಳಸುತ್ತಿರುವುದು ತಿಳಿದು ಬಂದಿದೆ ಎಂದು ಟೆಕ್ಕಿ ದೂರಿನಲ್ಲಿ ವಿವರಿಸಿದ್ದಾರೆ.


