ಲ್ಯಾಪ್ರೊಸ್ಕೋಪಿಕ್ ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆ ಬಳಿಕ 21 ವರ್ಷದ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ನಿರ್ಲಕ್ಷ್ಯತನ ಆರೋಪದಡಿ ಕೇಸ್ ದಾಖಲಾಗಿದೆ.
ಶಸ್ತ್ರಚಿಕಿತ್ಸೆಯ ನಂತರ ಉಂಟಾದ ಗಂಭೀರ ಸಮಸ್ಯೆಗಳಿಂದಾಗಿ ಮಹಿಳೆ ಮೃತಪಟ್ಟಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೃತ ಮಹಿಳೆಯ ಪತಿ ನೀಡಿದ ದೂರಿನ ಆಧಾರದಲ್ಲಿ ಮೊದಲಿಗೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಈ ಸಾವು ವೈದ್ಯಕೀಯ ನಿರ್ಲಕ್ಷ್ಯದಿಂದ ಸಂಭವಿಸಿರಬಹುದು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನೀಡಿದ ವರದಿಯನ್ವಯ ಪ್ರಕರಣ ದಾಖಲಾಗಿತ್ತು. ಡಾ.ಎಂ ವಿ ರಾಮಕೃಷ್ಣಯ್ಯ ವಿರುದ್ಧ ಎಫ್‌ಐಾರ್ ದಾಖಲಾಗಿದ್ದು ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೃತ ಮಹಿಳೆ ಮಾಧುರಿ ಕಳೆದ ವರ್ಷ ಮಾರ್ಚ್ 26ರಂದು ಬೆಳಗ್ಗೆ ಮೃತಪಟ್ಟಿದ್ದಾರೆ. ಪತಿ ಕೆ ಅನಿಲ್ ಕುಮಾರ್ ವೈದ್ಯಕೀಯ ನಿರ್ಲಕ್ಷ್ಯದ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆ ವರದಿ ನಂತರ ದೇಹದ ಒಳಗಿನ ಮುಖ್ಯ ಅಂಗಾಂಗಗಳ ಮಾದರಿಯನ್ನು ಫೊರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿಗೆ ಕಳುಹಿಸಲಾಗಿತ್ತು. ಬಂದಿದ್ದ ವರದಿಯನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಕಳುಹಿಸಲಾಗಿದ್ದು, ಅಂತಿಮ ವರದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ನಿರ್ಲಕ್ಷ್ಯ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಲಾಗಿತ್ತು.
ಪ್ರಕರಣ ಇನ್ನೂ ತನಿಖೆಯಲ್ಲಿದೆ. ಇದುವರೆಗೆ ವೈದ್ಯರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ವಿಭಾಗ 106(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


