ಧಾರವಾಡದ ಕೆಲಗೇರಿಯ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ವ್ಯಕ್ತಿ ಕರೆದುಕೊಂಡು ಹೋಗಿದ್ದು, ಮನೆ ಖರೀದಿಗೆ ನೀಡಿದ್ದ 10 ಲಕ್ಷ ರೂ.ವಂಚಿಸಿದ್ದಾನೆ. ಎರಡು ವರ್ಷಗಳಿಂದ ಮಗಳು ನಾಪತ್ತೆಯಾಗಿದ್ದು, ಪೊಲೀಸ್‌ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಪತ್ತೆಯಾಗಿರುವ ಯುವತಿಯ ತಾಯಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಕೆಲಗೇರಿಯ ನಿವಾಸಿ ಇಪ್ಪತ್ತೆರಡು ವರ್ಷದ ತಂಗೆಮ್ಮಾ ಎಂಬ ಯುವತಿ ಮನೆ ಎದುರಿನ ನಿವಾಸಿ ಕಾರು ಚಾಲಕನಾಗಿದ್ದ ಮುಸ್ಲಿಂ ವ್ಯಕ್ತಿಯ ಜೊತೆಗೆ ಪರಾರಿಯಾಗಿರುವುದಾಗಿ ಆಕೆಯ ತಾಯಿ ಮಂಜುಳಾ ಅವರೇ ಮಾಹಿತಿ ನೀಡಿದ್ದು, ದಯವಿಟ್ಟು ಮಗಳನ್ನು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಮಗಳಿಗೆ ಪರಿಚಿತ ಯುವಕನ ಜೊತೆ ವಿವಾಹವಾಗಿತ್ತು, ಆದರೆ ಆಕೆ ನಮ್ಮ ಜೊತೆಯೇ ಇದ್ದಳು. ಪತಿ ಆಗಾಗ ಬಂದು ಹೋಗುತ್ತಿದ್ದ. ಧಾರವಾಡದ ಕೆಲಗೇರಿಯಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ಪರಿಚಯದ ವಕೀಲರ ಕಾರು ಚಾಲಕನಾಗಿ ಮುನ್ನಾ ಎಂಬಾತ ಕೆಲಸ ಮಾಡುತ್ತಿದ್ದ. ನಾವು ನಮಗೆ ಸ್ವಂತದೊಂದು ಮನೆ ಮಾಡಬೇಕು. ಹೀಗಾಗಿ ಮನೆ ಹುಡುಕಿ ಕೊಡಿ ಎಂದು ಮುನ್ನಾ ಮತ್ತು ವಕೀಲರಿಗೆ ಹತ್ತು ಲಕ್ಷ ಹಣ ನೀಡಿದ್ದೆವು. ಬಳಿಕ ವಕೀಲರು ಮತ್ತು ಮುನ್ನಾ ಆಗಾಗ ಮನೆಗೆ ಬಂದು ಹೋಗುತ್ತಿದ್ದರು.
2023ರಲ್ಲಿ ನಾವು ಮನೆಯಲ್ಲಿ ಇಲ್ಲದ ಸಂದರ್ಭ ಮುನ್ನಾ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಧಾರವಾಡದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆವು. ಪೊಲೀಸರು ಮುನ್ನಾ ವಿರುದ್ದ ದೂರು ದಾಖಲಿಸಿಕೊಳ್ಳದೆ ನಾಪತ್ತೆ ದೂರು ದಾಖಲಿಸಿಕೊಂಡಿದ್ದರು. ಇಲ್ಲಿವರಗೆ ಮುನ್ನಾ ಮತ್ತು ತಮ್ಮ ಮಗಳು ಎಲ್ಲಿದ್ದಾರೆ ಎಂದು ಹುಡುಕಿಲ್ಲ ಎಂದು ಆರೋಪಿಸಿದ್ದಾರೆ.
ಮುನ್ನಾಗೆ ಬೆಳಗಾವಿ ರಾಮದುರ್ಗದ ಮುಸ್ಲಿಂ ಯುವತಿ ಜೊತೆ ಈ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಆತ ಹೆಂಡತಿ ಮಕ್ಕಳನ್ನು ಬಿಟ್ಟು ಮುನ್ನಾ ತಂಗೆಮ್ಮಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾನೆ. ಆತ ಸಿಮ್ ಬದಲಾವಣೆ ಮಾಡಿದ್ದು ಕುಟುಂಬದವರ ಸಂಪರ್ಕ ಇಟ್ಟುಕೊಂಡಿಲ್ಲ. ಆತನ ವಿರುದ್ಧ ದೆಹಲಿಯಲ್ಲಿ ಅತ್ಯಾಚಾರ ಪ್ರಕರಣ ಇದೆ. ಕ್ರಿಮಿನಲ್ ಹಿನ್ನೆಲೆಯಳ್ಳ ವ್ಯಕ್ತಿ ಎಂಬುದು ತಿಳಿದು ಬಂದಿದೆ. ಮಗಳನ್ನು ಹುಡುಕಿ ಕೊಡುವಂತೆ ಧಾರವಾಡ ಸಬ್ ಅರ್ಬನ್ ಪೊಲೀಸರಿಗೆ ಹತ್ತಾರು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದ ಕಾರಣ ಹಿಂದೂಪರ ಸಂಘಟನೆಗಳ ಜೊತೆ ಆಗಮಿಸಿ ಪೊಲೀಸ್ ಕಮಿಷನರ್ಗೆ ಮಂಜುಳಾ ದೂರು ನೀಡಿದ್ದಾರೆ.


