“ಕಾಂಗ್ರೆಸ್ ಪಕ್ಷವು ಜಾತ್ಯಾತೀತ ತತ್ವ ಉಳಿಸಬೇಕು ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಿದೆವು. ಆದರೆ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ವಿಶಾಲ ಹೃದಯ ಅವರಿಗೆ ಇರಲಿಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಕುಟುಕಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. “ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಹಾಗೂ ಅವರ ಮಗ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನಮ್ಮ ಪಕ್ಷ ಅವರಿಗೆ ಎಲ್ಲಾ ಅವಕಾಶಗಳನ್ನು ನೀಡಿದೆ” ಎಂದರು.
“ಅವರು ಕೊಟ್ಟಂತಹ ಸ್ಥಾನವನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಧೈರ್ಯ ಎರಡನ್ನೂ ಹೊಂದಿರಲಿಲ್ಲ. ಮೈತ್ರಿಯನ್ನು ಸಾವಧಾನದಿಂದ ಹಾಗೂ ಸಂತೋಷದಿಂದ ಮುನ್ನಡೆಸಿಕೊಂಡು ಹೋಗುವುದು ಅವರ ಕರ್ತವ್ಯವಾಗಿತ್ತು. ಜೊತೆಯಾಗಿ ತೆಗೆದುಕೊಂಡು ಹೋಗದ ಕಾರಣಕ್ಕೆ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು” ಎಂದು ಹೇಳಿದರು.


