Menu

ಒಡಿಶಾ ಕೈ ಶಾಸಕರಿಗೆ ತಲಾ ಐದು ಕೋಟಿ ರೂ. ಆಮಿಷವೊಡ್ಡಿದ ಇಬ್ಬರ ಬಂಧನ, ಮುಂದುವರಿದ ತನಿಖೆ: ಡಿಕೆ ಶಿವಕುಮಾರ್‌

“ಒಡಿಶಾದಿಂದ ಬಂದಿರುವ ನಾಲ್ವರು ಬಿಡದಿಯಲ್ಲಿ ವಾಸ್ತವ್ಯ ಹೂಡಿರುವ ನಮ್ಮ ಪಕ್ಷದ ಶಾಸಕರನ್ನು ಭೇಟಿ ಮಾಡಿ, ಅಡ್ಡಮತದಾನಕ್ಕೆ ತಲಾ 5 ಕೋಟಿ ರೂ.  ಆಮಿಷ ಒಡ್ಡಿದ್ದಾರೆ.  ಆದರೆ ನಮ್ಮ ಶಾಸಕರು ಕುದುರೆ ವ್ಯಾಪಾರಕ್ಕೆ ಸಿದ್ಧರಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ. ಆಮಿಷ ಒಡ್ಡಿದ ನಾಲ್ವರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದು ಮತ್ತಿಬ್ಬರನ್ನು  ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿದಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್  ಪ್ರತಿಕ್ರಿಯೆ ನೀಡಿದರು.  “ಒಡಿಶಾದಿಂದ ಬಂದಿರುವ ನಾಲ್ಕು ಜನರು ಸ್ಥಳೀಯ ಬ್ಯಾಟರಾಯನಪುರ ನಿವಾಸಿ ಸುರೇಶ್ ಎಂಬಾತನ ಸಹಾಯ ಪಡೆದು ರೂಮ್ ಬುಕ್ ಮಾಡಿಸಿದ್ದಾರೆ. ನಂತರ ನಮ್ಮ ಶಾಸಕರಿಗೆ ಆಮಿಷ ಒಡ್ಡಿದಾಗ ನಮ್ಮ ಪಕ್ಷದ ಎಂಎಲ್ ಎಗಳು ಈ ವಿಚಾರವನ್ನು ನಮ್ಮ ಗಮನಕ್ಕೆ ತಂದಿದ್ದಾರೆ. ಆಮಿಷ ಒಡ್ಡಿದ ನಾಲ್ವರ ಪೈಕಿ ಇಬ್ಬರು ತಪ್ಪಿಸಿಕೊಂಡಿದ್ದು ಮತ್ತಿಬ್ಬರನ್ನು ಹಿಡಿಯಲಾಗಿದೆ. ಅವರು ಇದೇ ಕೆಲಸಕ್ಕೆ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಖಾಲಿ ಚೆಕ್ ತಂದಿದ್ದಾರೆ. ಆ ಮೂಲಕ ಆಪರೇಷನ್ ಕಮಲ ಮಾಡಲಾಗುತ್ತಿದೆ. ಎಐಸಿಸಿ ಕಾರ್ಯದರ್ಶಿಯವರು ಹಾಗೂ ಮಿಕ್ಕ ನಾಯಕರು ಇತರೇ ವಿಚಾರ ತಿಳಿಸಲಿದ್ದಾರೆ” ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡುವ ಬಗ್ಗೆ ಕೇಳಿದಾಗ, “ಪಕ್ಷದ ಎಂಎಲ್ ಎಗಳು ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡದೆ ಬಿಜೆಪಿ ಅಧ್ಯಕ್ಷರನ್ನು ಭೇಟಿ ಮಾಡಲು ಆಗುತ್ತದೆಯೇ? ನಮ್ಮ ಪಕ್ಷದ ಶಾಸಕರು ತಮ್ಮ ಆಸೆಯಂತೆ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದು, ಅವರ ಆಶೀರ್ವಾದ ಪಡೆದಿದ್ದಾರೆ. ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದು, ಸೋಮವಾರ ಬೆಳಿಗ್ಗೆ ಅವರು ಒಡಿಸ್ಸಾಗೆ ಪ್ರಯಾಣ ಬೆಳೆಸಲಿದ್ದಾರೆ” ಎಂದು ಹೇಳಿದರು.

ರೆಸಾರ್ಟ್ ನಲ್ಲಿ ಅವರಿಗೆ ಆಮಿಷ ಒಡ್ಡಿರುವ ಘಟನೆ ಬಗ್ಗೆ ಮನವರಿಕೆ ಮಾಡಿದ್ದಾರಾ ಎಂದು ಕೇಳಿದಾಗ, “ಅವರಿಗೆ ಆಪರೇಷನ್ ಕಮಲದ ಪ್ರಯತ್ನದ ಬಗ್ಗೆ ವಿವರಿಸಿದ್ದಾರೆ. ಅವರಿಗೆ ಆಮಿಷ ಒಡ್ಡಲು ನೀಡಲಾಗಿದ್ದ ಚೆಕ್ ಅನ್ನು ಪೋಲೀಸರು ವಶಪಡಿಸಿಕೊಂಡಿದ್ದು, ಮಹಜರು ಮಾಡಲಿದ್ದಾರೆ” ಎಂದು ತಿಳಿಸಿದರು.

ಆಮಿಷ ಒಡ್ಡಿದವರ ವಿರುದ್ಧ ದೂರು ನೀಡಲಾಗುವುದೇ ಎಂದು ಕೇಳಿದಾಗ, “ಖಂಡಿತ, ಈಗಾಗಲೇ ದೂರು ನೀಡಲಾಗಿದ್ದು, ನಾಲ್ವರಲ್ಲಿ ಇಬ್ಬರನ್ನು ಬಂಧಿಸಿದ್ದು, ಪರಾರಿಯಾಗಿರುವ ಮತ್ತಿಬ್ಬರನ್ನು ಹುಡುಕುತ್ತಿದ್ದಾರೆ. ಪೋಲೀಸರು ತನಿಖೆ ಮಾಡಲಿದ್ದಾರೆ. ಕಾನೂನು ಮುಂದಿನದನ್ನು ನೋಡಿಕೊಳ್ಳಲಿದೆ” ಎಂದು ತಿಳಿಸಿದರು.

ಪಕ್ಷಕ್ಕೆ ಎದುರಾದ ಟ್ರಬಲ್ ಅನ್ನು ನೀವು ಮತ್ತೊಮ್ಮೆ ಯಶಸ್ವಿಯಾಗಿ ನಿಭಾಯಿಸಿದ್ದೀರಿ, ನಿಮ್ಮ ಮೊಗದಲ್ಲಿ ವಿಜಯದ ಮಂದಹಾಸ ಮೂಡಿದೆ ಎಂದು ಕೇಳಿದಾಗ, “ಯಾವ ಟ್ರಬಲ್ಲೂ ಇಲ್ಲ. ನಾವು ಇಂತಹ ಪರಿಸ್ಥಿತಿ ಎದುರಿಸುತ್ತಲೇ ಇರುತ್ತೇವೆ. ನಾನು ಸದಾ ಮಂದಹಾಸದಲ್ಲೇ ಇರುತ್ತೇನೆ. ನಾನು ನನ್ನ ಆತ್ಮಸಾಕ್ಷಿಯನ್ನು ನಂಬಿದ್ದೇನೆ” ಎಂದು ಉತ್ತರಿಸಿದರು..

ದಾವಣಗೆರೆ ಟಿಕೆಟ್ ಹಂಚಿಕೆ ಗೊಂದಲ ಬಗೆಹರಿದಿದೆಯೇ ಎಂದಾಗ, “ಎಲ್ಲಿದೆ ಗೊಂದಲ. ಯಾವ ಗೊಂದಲವೂ ಇಲ್ಲ. ಪಕ್ಷ ಏನು ಹೇಳುತ್ತದೆಯೋ ಅದನ್ನು ಒಪ್ಪಿಕೊಳ್ಳುವುದಾಗಿ ಎಲ್ಲಾ ನಾಯಕರು ಹೇಳಿದ್ದಾರೆ” ಎಂದರು.

ನಿರ್ಮಲಾನಂದ ಶ್ರೀಗಳ ಹೆಜ್ಜೆ ತಪ್ಪುತ್ತಿದೆ ಎಂಬ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ನಾನು ಮಾತನಾಡುವುದಿಲ್ಲ” ಎಂದು  ಪ್ರತಿಕ್ರಿಯಿಸಿದರು.

Related Posts

Leave a Reply

Your email address will not be published. Required fields are marked *