ಜಿಲ್ಲಾಧಿಕಾರಿ ಮತ್ತು ಎಡಿಸಿ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು ನಕಲಿ ಬಿಲ್ ಸಲ್ಲಿಸಿದ ಆರೋಪದಡಿ ಚಿತ್ರದುರ್ಗ ನಗರಾಭಿವೃದ್ಧಿ ಕೋಶದ ಐವರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಸೈಯದ್ ಸಾದಿಕ್ ಪರಾರಿಯಾಗಿದ್ದಾನೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಸಿಟಿ ಲೆವಲ್ ಟೆಕ್ನಿಕಲ್ ಸೆಲ್ ಸಿಬ್ಬಂದಿ ವೇತನದ ಹೆಸರಿನಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ನಕಲಿ ಬಿಲ್ ಸಲ್ಲಿಸಿರುವುದು ಪತ್ತೆಯಾಗಿದೆ. ಖಜಾನೆ ಇಲಾಖೆಯು ಡಿಜಿಟಲ್ ಸಹಿ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಅಕ್ರಮ ಬಹಿರಂಗಗೊಂಡಿದೆ. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್ ನೀಡಿದ ದೂರಿನ ಅನ್ವಯ ಹೊರಗುತ್ತಿಗೆ ನೌಕರರಾದ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮೆಹಬೂಬ್ ಭಾಷಾ ಹಾಗೂ ಎಂಟರ್‌ಪ್ರೈಸಸ್‌ವೊಂದರ ಮಾಲೀಕ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿದೆ.
ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಎಡಿಸಿ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೆಟ್ ಕೀ ಕಳವು ಮಾಡಿ ದುರುಪಯೋಗಪಡಿಸಿಕೊಂಡಿರುವ ಆರೋಪವೂ ಬೆಳಕಿಗೆ ಬಂದಿದೆ.ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.


