ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಇತರ ನಗರ ಪ್ರದೇಶ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 30 ರಿಂದ 32 ಲಕ್ಷ ನಿವೇಶನ- ಅಸ್ತಿಗಳಿಗೆ ಯಾವುದೇ ಇ-ದಾಖಲೆ ಇಲ್ಲ. ಈ ಎಲ್ಲಾ ಆಸ್ತಿಗಳಿಗೂ ಒಂದು ಬಾರಿಯ ಪರಿಹಾರವಾಗಿ ಎಲೆಕ್ಟ್ರಾನಿಕ್ ಬಿ-ಖಾತಾ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆಗೆ ಸಭೆ ನಡೆಸಿದ ಅವರು, ಫೆ.10ರ ಒಳಗಾಗಿ ಈ ಬಗ್ಗೆ ಸುತ್ತೋಲೆ ಹೊರಡಿಸಲಿದ್ದು, ಮೂರು ತಿಂಗಳಲ್ಲಿ ಖಾತಾ ವಿತರಣೆ ಮಾಡಬೇಕು. ನಗರಸಭೆ, ಪುರಸಭೆ ಅಧಿಕಾರಿಗಳೇ ಮನೆ-ಮನೆಗೂ ಹೋಗಿ ಬಿ ಖಾತಾ ನೀಡಬೇಕು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜ.7ರಂದು ಸಭೆ ನಡೆಸಿ ಫೆ.10 ರಿಂದ ದಾಖಲೆ ಇಲ್ಲದ ನಿವೇಶನಗಳ ಮಾಲೀಕ ರಿಗೆ ಒಮ್ಮೆ ಇ-ಆಸ್ತಿ ನಮೂದಿಸಿ ಬಿ-ಖಾತಾ ಅಥವಾ ಸಮಾನಾಂತರ ದಾಖಲೆ ನೀಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದರು.
ಅನಧಿಕೃತ ನಿವೇಶನ ಎಷ್ಟು ನಿವೇಶನ ಇವೆ ಎಂದು ಗುರುತಿಸಿ ಸರ್ಕಾರವೇ ಬಿ-ಖಾತಾ ಮಾಡಿಕೊಡಲಿದೆ. ಬಳಿಕ ರಾಜ್ಯದಲ್ಲಿ ಬಿ-ಖಾತಾ ಇರುವುದಿಲ್ಲ. ಎ-ಖಾತಾ ಮಾತ್ರ ಇರಲಿದ್ದು, ನಗರ ವ್ಯಾಪ್ತಿಯಲ್ಲಿ ಈ ಅಭಿಯಾನ ಮುಗಿಯುತ್ತಿ ದ್ದಂತೆ ಗ್ರಾಪಂ ವ್ಯಾಪ್ತಿಯಲ್ಲೂ ಇದೇ ಮಾದರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಡಿಸೆಂಬರ್ ಮೊದಲ ವಾರದಿಂದಲೇ ದರ್ಖಾಸ್ತು ಪೋಡಿ ಅಭಿಯಾನ ಶುರುವಾಗಿದ್ದು, 26 ಸಾವಿರ ಮಂಜೂರಿದಾರರ ಜಮೀನುಗಳ ಸರ್ವೇಗೆ ಅನುಮತಿ ನೀಡಲಾಗಿದೆ. 5 ಸಾವಿರ ಜನರಿಗೆ ಈಗಾಗಲೇ ಸರ್ವೇ ಮುಗಿಸಿದ್ದೇವೆ. ಈ ಎಲ್ಲರಿಗೂ ಹೊಸ ಪಹಣಿ ಹಾಗೂ ನಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.