Menu

ಸಿಎಂ ಸಿದ್ದರಾಮಯ್ಯನವರಿಂದ ಸಾಲದ ಬಜೆಟ್‌ ಮಂಡನೆ: ಆರ್‌ ಅಶೋಕ

ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ 1.15 ಲಕ್ಷ ಕೋಟಿ ರೂ. ಸಾಲ ಮಾಡಿ ಬಜೆಟ್‌ ಮಂಡಿಸಲಿದ್ದಾರೆ. ಈ ಬಾರಿಯೂ ಜನರ ಮೇಲೆ ತೆರಿಗೆಗಳ ಹೊರೆ ಹಾಕುವುದು ಖಚಿತ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಹೇಳಿದರು.

ಮಾಧ್ಯಮದವರೊಂದಿಗೆ  ಮಾತನಾಡಿದ ಅವರು, ಸಿದ್ದರಾಮಯ್ಯ ಎಂದರೆ ತೆರಿಗೆ ಹೇರುವ ರಾಮಯ್ಯ ಆಗಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್‌ ತೆರಿಗೆಗಳ ಹೊರೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ತಿಂಗಳಿಗೆ ನಾಲ್ಕರಂತೆ ತೆರಿಗೆ ಹಾಕುತ್ತಾರೆ. ಈಗಾಗಲೇ 36 ತೆರಿಗೆಗಳನ್ನು ಜನರ ಮೇಲೆ ಹೇರಿದ್ದಾರೆ. ಚುನಾವಣೆಗೆ ಮುನ್ನ ಜನರ ಮೇಲೆ ಹೊರೆ ಹಾಕದೆ ಗ್ಯಾರಂಟಿ ತರುತ್ತೇವೆ ಎಂದು ಭರವಸೆ ನೀಡಿ, ಈಗ ತೆರಿಗೆಗಳ ಹೊರೆ ಹೇರಿದ್ದಾರೆ. ಸಿದ್ದರಾಮಯ್ಯನವರ ಅವಧಿ ಮುಗಿಯುವ ವೇಳೆಗೆ ಒಟ್ಟು ಸಾಲ 8 ಲಕ್ಷ ಕೋಟಿ ರೂ. ಮೀರಲಿದೆ. ಇದರಿಂದಾಗಿ ಆರ್ಥಿಕ ಶಿಸ್ತು ಮೀರಿ ಹೋಗುತ್ತದೆ. ಇದು ಅವರ ಕಣ್ಕಟ್ಟು ವಿದ್ಯೆ ಎಂದರು.

ಸಿಎಂ ಸಿದ್ದರಾಮಯ್ಯ ಇಲ್ಲದ ಆದಾಯವನ್ನು ಸೃಷ್ಟಿಸಿ ಜಿಎಸ್‌ಡಿಪಿಗೆ ಹೋಲಿಕೆ ಮಾಡುವ ಶೇಕಡ ಪ್ರಮಾಣವನ್ನು ಕಡಿಮೆ ಇರುವಂತೆ ತೋರಿಸುತ್ತಾರೆ. ಈ ಮೂಲಕ ಆರ್ಥಿಕ ಶಿಸ್ತು ಪಾಲಿಸಿದ್ದೇವೆ ಎಂದು ಸುಳ್ಳಾಗಿ ತೋರಿಸುತ್ತಾರೆ. ಬಜೆಟ್‌ ಎಂದರೆ ಆದಾಯ ಹೆಚ್ಚಿಸಿ, ಜನರಿಗೆ ಹೊರೆಯಾಗದಂತೆ ಮಾಡಬೇಕು. ಇದನ್ನೇ ಆರ್ಥಿಕ ಪರಿಣತಿ ಎಂದು ಹೇಳುತ್ತಾರೆ. ಸಾಲ ಮಾಡಿ ಸರ್ಕಾರ ನಡೆಸಲು ಇವರೇ ಬೇಕಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ ಎಂದು ಜನರು ಅಂದುಕೊಂಡಿದ್ದು ಸಂಪೂರ್ಣ ಸುಳ್ಳಾಗಿದೆ ಎಂದು ಟೀಕಿಸಿದರು.

ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಲ ಇಲ್ಲದ ಬಜೆಟ್‌ ಮಂಡಿಸಿದ್ದು, ಇನ್ನೂ 24,400 ಕೋಟಿ ರೂ. ಸಾಲ ಪಡೆಯಬಹುದಿತ್ತು. ಅಂತಹ ಅವಕಾಶವಿದ್ದರೂ ಅವರು ಆಗ ಸಾಲ ಪಡೆದಿರಲಿಲ್ಲ. ಕಾಂಗ್ರೆಸ್‌ ಮಾತ್ರ ಪ್ರತಿ ವರ್ಷ ಸಾಲ ಪಡೆಯುತ್ತಲೇ ಇದೆ. ಈ ಬಾರಿ 1.15 ಲಕ್ಷ ಕೋಟಿ ರೂ. ಸಾಲ ಪಡೆಯಲಿದ್ದಾರೆ. ಸಾಲವನ್ನು ಜನರ ತಲೆ ಮೇಲೆ ಹೇರುವ ಬಜೆಟ್‌ನ್ನು ಈ ಬಾರಿ ಮಂಡಿಸುತ್ತಾರೆ. ನಂಜುಂಡಪ್ಪ ವರದಿಯಲ್ಲಿದ್ದ ಹಿಂದುಳಿದ ತಾಲೂಕುಗಳ ಸಂಖ್ಯೆ, ಗೋವಿಂದರಾವ್‌ ವರದಿಯಲ್ಲಿ ಇನ್ನಷ್ಟು ಅಧಿಕವಾಗಿದೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಪ್ರತಿ ವರ್ಷ 15,000 ಕೋಟಿ ರೂ. ಮೀಸಲಿಡಬೇಕೆಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ಬಜೆಟ್‌ನಲ್ಲಿ ಸರ್ಕಾರ ಇಷ್ಟೂ ಅನುದಾನವನ್ನು ಮೀಸಲಿಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಆಗದಿದ್ದರೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಹೇಳಿದ್ದಾರೆ. ಇಂತಹ ಸ್ಥಿತಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಅಂಶಗಳಿರುತ್ತದೆ. ಆದೇಶ ಹೊರಡಿಸಲಾಗಿದೆ, ಅಭಿಪ್ರಾಯ ಸಂಗ್ರಹಣೆ ಎಂಬುದನ್ನೇ ಸಾಧನೆಯಾಗಿ ಈ ಬಜೆಟ್‌ನಲ್ಲಿ ತೋರಿಸುತ್ತಾರೆ. ಪೂರ್ಣವಾಗಿರುವ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ತೆರಿಗೆಗಳನ್ನು ಸಂಗ್ರಹಿಸುವುದರಲ್ಲೂ ಸರ್ಕಾರ ವಿಫಲವಾಗಿದ್ದು, ಕೇವಲ 48% ಸಾಧನೆ ಆಗಿದೆ. ನಿಗದಿ ಮಾಡಿದ ಅನುದಾನದಲ್ಲಿ ಕೆಲವು ಇಲಾಖೆಗಳಿಗೆ 40% ಹಣವನ್ನೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಇಲಾಖೆಗಳಿಗೆ ಖರ್ಚು ಮಾಡಲು ಹಣವೇ ಇರುವುದಿಲ್ಲ ಎಂದರು.

ಕೆಪಿಎಸ್‌ಸಿ ಎಂದರೆ ಕಳ್ಳರ ದಂಧೆಯ ಕೇಂದ್ರ. ಹಣ ಕೊಡಲ್ಲ ಎಂದರೆ ಕಚೇರಿಯ ಒಳಗೆ ಕೂಡ ಬಿಡುವುದಿಲ್ಲ. ಕುಟುಂಬ, ಜಾತಿ ಎನ್ನುವುದು ಇಲ್ಲಿ ಮಾನದಂಡವೇ ಹೊರತು ಅಂಕ, ಪ್ರತಿಭೆ ಮುಖ್ಯವಲ್ಲ. ಕೆಪಿಎಸ್‌ಸಿ ಮುಚ್ಚಿ ಕೇಂದ್ರದ ಯುಪಿಎಸ್‌ಸಿ ಮಾದರಿಯ ಒಂದು ಸಂಸ್ಥೆಯನ್ನು ನಿರ್ಮಿಸಬೇಕು. ಈ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಮಾತಾಡುತ್ತೇನೆ. ಜೊತೆಗೆ ಕಾನೂನು ಸುವ್ಯವಸ್ಥೆ, ಪ್ರತಿಭಟನೆಗಳು, ಮೊದಲಾದ ವಿಷಯಗಳ ಬಗ್ಗೆ ಮಾತಾಡುತ್ತೇನೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *