Menu

ಇರಾನ್‌ ಮೇಲಿನ ದಾಳಿಯಿಂದ ಎಪ್ಸ್ಟೀನ್ ಕೇಸ್‌ ಫೈಲ್‌ಗಳು ನಾಶವಾಗದು: ಟ್ರಂಪ್‌ ವಿರುದ್ಧ ಮಾಸ್ಸಿ ಕಿಡಿ

ಇರಾನ್ ಮೇಲೆ ಅಮೆರಿಕ  ದಾಳಿ ನಡೆಸಿ ಧ್ವಂಸಗೊಳಿಸಿದ ಮಾತ್ರಕ್ಕೆ ಎಪ್ಸ್ಟೀನ್ ಪ್ರಕರಣದ ದಾಖಲೆಗಳು ನಾಶವಾಗುವುದಿಲ್ಲ, ಈ ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ರಿಪಬ್ಲಿಕನ್ ಪಕ್ಷದ ಶಾಸಕ ಥಾಮಸ್ ಮಾಸ್ಸಿ ಗಂಭೀರ ಆರೋಪ ಮಾಡಿದ್ದಾರೆ.

ಇರಾನ್‌ ದಾಳಿಯಲ್ಲಿ ಅಲ್ಲಿನ ನಾಯಕ ಅಲಿ ಖಮೇನಿ ಹತರಾಗಿರುವುದು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಆದರೆ ಈ ಯುದ್ಧದ ಹಿಂದೆ ಅಮೆರಿಕದ ಒಳಗಿನ ಕರಾಳ ರಹಸ್ಯಗಳನ್ನು ಮುಚ್ಚಿಡುವ ಸಂಚು ಅಡಗಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ಜೆಫ್ರಿ ಎಪ್ಸ್ಟೀನ್ ಲೈಂಗಿಕ ಕಳ್ಳಸಾಗಣೆ ಮತ್ತು ಗಣ್ಯರ ಕ್ರಿಮಿನಲ್ ಜಾಲದ ಪ್ರಮುಖ ಆರೋಪಿ. ಆತನಿಗೆ ಸಂಬಂಧಿಸಿದ ಮೂರು ಮಿಲಿಯನ್ ದಾಖಲೆಗಳು ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ. ಈ ದಾಖಲೆಗಳಲ್ಲಿ ಅಮೆರಿಕದ ಅಧ್ಯಕ್ಷರು ಮತ್ತು ಪತ್ನಿ ಮೆಲಾನಿಯಾ ಅವರ ಹೆಸರು ಹಲವು ಬಾರಿ ಉಲ್ಲೇಖವಾಗಿವೆ ಎಂದು ಹೇಳಲಾಗುತ್ತಿದೆ. ಜಗತ್ತಿನ ಯಾವುದೋ ದೇಶದ ಮೇಲೆ ಬಾಂಬ್ ದಾಳಿ ಮಾಡುವುದರಿಂದ ಎಪ್ಸ್ಟೀನ್ ದಾಖಲೆಗಳು ಮಾಯವಾಗುವುದಿಲ್ಲ ಎಂದು ಮಾಸ್ಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಟ್ರಂಪ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಯಾವಾಗಲೆಲ್ಲಾ ಎಪ್ಸ್ಟೀನ್ ಪ್ರಕರಣದಂತಹ ರಾಜಕೀಯವಾಗಿ ಸೂಕ್ಷ್ಮ ವಿಷಯಗಳು ಟ್ರಂಪ್‌ ಆಡಳಿತದಲ್ಲಿ ಮುನ್ನೆಲೆಗೆ ಬರುತ್ತವೋ ಅಂತಹ ಸಮಯದಲ್ಲಿ ವಿದೇಶಾಂಗ ನೀತಿಯ ದೊಡ್ಡ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದು ವಿಶ್ಲೇಷಕರ ವಾದ.

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಅಪಹರಣ ಕೂಡ ಜನರ ಗಮನ ಬೇರೆಡೆಗೆ ಸೆಳೆಯುವ ತಂತ್ರ ಎಂದು ಬಣ್ಣಿಸಲಾಗಿತ್ತು. ಇರಾನ್ ಮೇಲಿನ ದಾಳಿಯು ಕಾಂಗ್ರೆಸ್‌ ಅನುಮೋದನೆ ಪಡೆಯದ ಅನಧಿಕೃತ ಯುದ್ಧ ಎಂದು ಮಾಸ್ಸಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *