Menu

ಇರಾನ್-ಇಸ್ರೇಲ್ ಸಂಘರ್ಷ: ರಾಜ್ಯದವರ ರಕ್ಷಣೆಗೆ ಸರ್ಕಾರ ಕ್ರಮವೆಂದ ಸಚಿವ ಕೃಷ್ಣ ಭೈರೇಗೌಡ

ಇರಾನ್- ಇಸ್ರೇಲ್ ಸಂಘರ್ಷದಿಂದ ನಲುಗಿರುವ ಮಧ್ಯಪ್ರಾಚ್ಯ ದೇಶಗಳಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ವಹಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರು ಆತಂಕಕ್ಕೆ ಒಳಗಾಗಬೇಕಿಲ್ಲ. ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಎಲ್ಲರ ರಕ್ಷಣೆಗೂ ಕ್ರಮ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

ಶನಿವಾರದಿಂದಲೇ ಸಹಾಯವಾಣಿ ಪ್ರಾರಂಭ ಮಾಡಲಾಗಿದೆ. 109 ಜನ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈಗಾಗಲೇ ವಿದೇಶಾಂಗ ಇಲಾಖೆ ಮತ್ತು ದೆಹಲಿಯಲ್ಲಿರುವ ನಮ್ಮ ರೆಸಿಡೆಂಟ್ ಕಮಿಷನರ್ ಕೇಂದ್ರದ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಹಿತಿ ನೀಡಿದರು.

ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರು ನಮ್ಮನ್ನುಹೇಗೆ ವಾಪಸ್ ಕರೆಸುತ್ತೀರಾ, ವಿಶೇಷ ವಿಮಾನ ವ್ಯವಸ್ಥೆ ಮಾಡುವಿರಾ ಎಂದು ಕೇಳಿದ್ದು, ಆ ವಿಚಾರ ನಾವು ಕೇಂದ್ರದ ಜೊತೆ ಮಾತನಾಡುತ್ತಿದ್ದು, ಈಗ ಏರ್ ಟ್ರಾಫಿಕ್ ನಿಷೇಧ ಆಗಿದೆ. ಏರ್ ಟ್ರಾಫಿಕ್ ಕ್ಲಿಯರ್ ಆದ ಕೂಡಲೇ ಕೇಂದ್ರ ಸರ್ಕಾರ ಹೇಗೆ ಕರೆಸಿಕೊಳ್ಳುತ್ತದೆ ನಮಗೆ ಮಾಹಿತಿ ಲಭ್ಯವಾಗಲಿದೆ. ಏರ್ ಟ್ರಾಫಿಕ್ ಕ್ಲಿಯರ್ ಆಗುವವರೆಗೆ ಕರೆ ತರಲು ಆಗದು. ಅಲ್ಲಿವರೆಗೆ ಎಲ್ಲರೂ ಶಾಂತರಾಗಿರಬೇಕು ಎಂದು ಮನವಿ ಮಾಡಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ಸಿಲುಕಿರುವವರು ವೀಸಾ ಸಮಸ್ಯೆ ಇದ್ದರೆ ಸ್ಥಳೀಯ ರಾಯಭಾರಿ ಕಚೇರಿಗೆ ಅಥವಾ ನಮಗೆ ಕರೆ ಮಾಡಿದರೆ ವೀಸಾ ವ್ಯವಸ್ಥೆ ಮಾಡಲಾಗುತ್ತದೆ. ಕರ್ನಾಟಕದವರು ವಾಪಸ್ ಬರುವವರೆಗೆ ಅಲ್ಲಿ ಆಗುವ ಖರ್ಚು ವೆಚ್ಚ ರಾಜ್ಯ ಸರ್ಕಾರವೇ ಭರಿಸಲಿದೆ. ಇದನ್ನೆಲ್ಲ ನಾವು ಕೇಂದ್ರ ಸರ್ಕಾರದ ಮೂಲಕ ಮಾಡಬೇಕು. ಕೇಂದ್ರ ಸರ್ಕಾರ ಹಣ ಭರಿಸಿ ನಮಗೆ ಮಾಹಿತಿ ಕೊಟ್ಟರೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಅದನ್ನು ಭರಿಸಲಿದೆ ಎಂದು ಸಚಿವರು ಹೇಳಿದ್ದಾರೆ.

ಇನ್ನೂ ಒಂದು ವಾರ ಯುದ್ಧವಿರುವ ಬಗ್ಗೆ ಮಾಹಿತಿ ಇದೆ, ಅಲ್ಲಿವರೆಗೆ ಎಲ್ಲರೂ ಶಾಂತಿಯಿಂದ ಇರಬೇಕಾಗಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕದವರು ಸ್ಥಳೀಯ ರಾಯಭಾರ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿಕೊಂಡು ಸ್ಥಳೀಯ ಆಡಳಿತದ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *