ಎವಿಜಿಸಿ- ಎಕ್ಸ್ ಆರ್ ವಿಭಾಗದಲ್ಲಿ 2028 ರ ವೇಳೆಗೆ ಸುಮಾರು 50,000 ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. 70% ಉದ್ಯೋಗಿಗಳು ಸೃಜನಶೀಲ ವೃತ್ತಿಪರರಾಗಿದ್ದಾರೆ. ಈ ಮೂಲಕ, 2028 ರ ವೇಳೆಗೆ 30,000 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಕರ್ನಾಟಕ ರಾಜ್ಯ ಸಂಶೋಧನೆಗೆ, ನೂತನ ಆವಿಷ್ಕಾರಗಳಿಗೆ, ಉದ್ಯೋಗಗಳಿಗೆ ಹಾಗೂ ಪ್ರತಿಭಾವಂತರಿಗೆ ಕಾಯಕ ಭೂಮಿಯಾಗಿದೆ. ಕರ್ನಾಟಕವು 875 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ. ಡಿಜಿಟಲ್ ಮಾಧ್ಯಮ ಕಂಪನಿಗಳಿಗೆ ನೆಲೆಯಾಗಿ ನಮ್ಮ ರಾಜ್ಯ ರೂಪುಗೊಂಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಬಣ್ಣಿಸಿದರು.
ಲಲಿತ್ ಅಶೋಕದಲ್ಲಿ ನಡೆದ ಬೆಂಗಳೂರು ಜಿಎಎಫ್ ಎಕ್ಸ್ ಸಮ್ಮಿಟ್ ನಲ್ಲಿ ಅವರು ಮಾತನಾಡಿದರು. ಆರೆಂಜ್ ಎಕಾನಮಿ ಬಗ್ಗೆ ಪ್ರಧಾನಮಂತ್ರಿ ಮಾತನಾಡಿದ್ದಾರೆ. ಆದರೆ ಇದರ ಬಗ್ಗೆ ನಾವು 2016 ರಲ್ಲಿಯೇ ನೀತಿ ರೂಪಿಸಿದ್ದೆವು. ಈ ಕ್ಷೇತ್ರದ ಬೆಳವಣಿಗೆಗೆ ಪೂರವಾಗಿ ನಮ್ಮ ಸರ್ಕಾರ ಕೆಲಸ ಮಾಡಿದೆ . ಪ್ರತಿವರ್ಷ 1.50 ಲಕ್ಷ ಯುವ ಹಾಗೂ ಪ್ರತಿಭಾವಂತ ಐಟಿ ಉದ್ಯೋಗಿಗಳು ಕರ್ನಾಟಕದಿಂದ ಹೊರಹೊಮ್ಮುತ್ತಿದ್ದಾರೆ. ಇಡೀ ಜಗತ್ತೇ ನಮ್ಮಕಡೆ ನೋಡುತ್ತಿದೆ. ನಮ್ಮ ರಾಜ್ಯವು ಈಗಾಗಲೇ ಏಷ್ಯಾದ ಅತ್ಯಂತ ಬಲಿಷ್ಠ ತಂತ್ರಜ್ಞಾನ ವ್ಯವಸ್ಥೆ ಹೊಂದಿರುವ ರಾಜ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ಚಲನಚಿತ್ರ ಉದ್ದಿಮೆ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಈಗಾಗಲೇ ನಮ್ಮ ಚಲನಚಿತ್ರಗಳು ಹಾಲಿವುಡ್ ಚಿತ್ರಗಳಿಗೆ ಪ್ರತಿಸ್ಪರ್ಧಿಯಾಗಿವೆ. ಭವಿಷ್ಯವನ್ನು ಗುರಿಯಲ್ಲಿಟ್ಟುಕೊಂಡು ಕರ್ನಾಟಕದಲ್ಲಿ 6,50,000 ಉದ್ಯೋಗಿಗಳಿಗೆ 2023-2024 ರಲ್ಲಿ ಎಐ ಕೌಶಲ್ಯಗಳ ಕುರಿತು ತರಬೇತಿ ನೀಡಲಾಗಿದೆ. 2022 ಕ್ಕೆ ಹೋಲಿಸಿ ನೋಡಿದರೆ 2023 ರಲ್ಲಿ ಏಐ ಸಂಬಂಧಿತ ತರಭೇತಿ, ಚಟುವಟಿಗಳು ಶೇ.9ರಷ್ಟು ಹೆಚ್ಚಳವಾಗಿದೆ. ಈ ಏರಿಕೆಯಿಂದ ಭವಿಷ್ಯದ ತಂತ್ರಜ್ಞಾನ ಬೆಳವಣಿಗೆಯಲ್ಲಿ ಕರ್ನಾಟಕ ಅತ್ಯಂತ ಮುಂದುವರೆದ ಸ್ಥಾನದಲ್ಲಿ ಇರಲಿದೆ ಎಂದರು.
ಗೇಮಿಂಗ್, ನೈಜ-ಸಮಯದ ವಿಷಯ ರಚನೆ, ಕೃತಕ ಬುದ್ಧಿಮತ್ತೆ (AI) ಆಧಾರಿತ ಅನಿಮೇಷನ್ ಹೀಗೆ ಅನೇಕ ಸ್ಟಾರ್ಟ್‌ಅಪ್‌ಗಳು ಕರ್ನಾಟಕದಿಂದ ಹೊರಹೊಮ್ಮುತ್ತಿವೆ. ಹೂಡಿಕೆದಾರರು, ಜಾಗತಿಕ ಸ್ಟುಡಿಯೋಗಳು ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಟಾರ್ಟ್‌ಅಪ್‌ಗಳನ್ನು ಸಂಪರ್ಕಿಸುವ ಮೂಲಕ ಹೊಸ ನಾವೀನ್ಯತೆ ಮತ್ತು ಸಹಯೋಗವನ್ನು ವೃದ್ದಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ನಾವು ಈ ವಲಯದ ಬೆಳವಣಿಗೆಗೆ ಪೂರವಾದ ವಾತಾವರಣ ನಿರ್ಮಿಸಲು ಬದ್ದವಾಗಿದ್ದೇವೆ. AVGC-XR ವಲಯ – ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ ಟೆಂಡ್ ರಿಯಾಲಿಟಿ – ವಿಶ್ವಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ 20 ಸಾವಿರ ಕೋಟಿಯಷ್ಟು ವಹಿವಾಟನ್ನು ಈ ವಿಭಾಗ ಮಾಡುತ್ತಿದೆ ಎಂದು ಡಿಸಿಎಂ ತಿಳಿಸಿದರು.
ಜಿಎಎಫ್ ಎಕ್ಸ್ ಕ್ಷೇತ್ರ ವಾರ್ಷಿಕವಾಗಿ 25–30% ರಷ್ಟು ಬೆಳೆಯುತ್ತಿದ್ದು, ಮುಂಬರುವ ವರ್ಷಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಪ್ರಿಯಾಂಕ್ ಖರ್ಗೆ ಸಾರಥ್ಯ ವಹಿಸಿರುವುದು ಹೆಚ್ಚಿನ ಬಲ ತುಂಬಿದೆ. 42 ದೇಶಗಳ ಪ್ರತಿನಿಧಿಗಳನ್ನು ಈ ಕುರಿತಾಗಿ ಚರ್ಚೆ ನಡೆಸಲು ನಾವು ಆಹ್ವಾನಿಸಿದ್ದೇವೆ. ಏಕೆಂದರೆ ನಮ್ಮ ಕರ್ನಾಟಕ ಈ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ಮುಖ್ಯಮಂತ್ರಿಯವರು ದಿಕ್ಸೂಚಿ ಭಾಷಣದಲ್ಲಿ ಯುವ ಉದ್ಯಮಿಗಳ ಬೆಂಬಲವಾಗಿ ಮಾತನಾಡಿದ್ದಾರೆ. ನಾನು ಬೆಂಗಳೂರು ನಗರದ ಉಸ್ತುವಾರಿ ವಹಿಸಿರುವವನಾಗಿ ಈ ನಗರದ ಎಲ್ಲಾ ಜನರಿಗೂ ಪೂರಕವಾಗಿರಬೇಕು ಎನ್ನುವ ರೀತಿಯಲ್ಲಿ ರೂಪಿಸಲು ಅನೇಕ ಯೋಜನೆಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರು ಭಾರತದ ಐಟಿ ಕ್ರಾಂತಿಯನ್ನು ಮುನ್ನಡೆಸಿದ ನಗರವಾಗಿ ಗುರುತಿಸಿಕೊಂಡಿದೆ. ಈಗ, ಭಾರತದ ಸೃಜನಶೀಲ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುವ ನಗರವಾಗಿ ರೂಪುಗೊಳ್ಳಯತ್ತಿದೆ. ಇದಕ್ಕೆ ಎಲ್ಲರೂ ಸೇರಿ ಕೈಜೋಡಿಸೋಣ ಎಂದರು.


