Menu

ಭಾರತಕ್ಕೆ ತಿರುಗೇಟು ನೀಡುವ ರೀತಿ ಜಾಗತಿಕ ಮಾಧ್ಯಮದಲ್ಲಿ ಟ್ರಂಪ್ ಮಾತುಗಳ ವಿಪರೀತಾರ್ಥ

ಭಾರತಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಜಾಗತಿಕ ಮಾಧ್ಯಮದ ಮುಂದೆ ವಿವಾದಾಸ್ಪದ ವಿಷಯಗಳನ್ನು ಡೊನಾಲ್ಡ್ ಟ್ರಂಪ್ ಪದೇ ಪದೆ ಕೆದಕುವುದನ್ನು ಕಂಡಾಗ. ಭಾರತದ ಜೊತೆ ಅಮೆರಿಕಕ್ಕೆ ದೀರ್ಘಕಾಲದ ಸ್ನೇಹಪೂರ್ವಕ ಸಂಬಂಧಗಳ ಬಗ್ಗೆ ನಿಜವಾದ ಕಾಳಜಿ ಇದೆಯೇ ಎಂಬ ಶಂಕೆ ಮೂಡುವುದಂತೂ ದಿಟ.

ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಚರ್ಚೆಗೆ ಗ್ರಾಸವಾಗಿದ್ದಾರೆ. ಇವರ ಸುಂಕಾಸ್ತ್ರಕ್ಕೆ ಅಮೆರಿಕ ಸರ್ವೋನ್ನತ ನ್ಯಾಯಾಲಯವೇ ಈಗ ಚಾಟಿ ಬೀಸಿದೆ ! ಸುಂಕ ನಿಗದಿಪಡಿಸುವ ವಿಷಯದಲ್ಲಿ ರಾಷ್ಟ್ರಾಧ್ಯಕ್ಷರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಠರಾವುಗಳನ್ನು ಜಾರಿಗೊಳಿಸುತ್ತಿದ್ದಾರೆ. ಇದು ಕಾನೂನು ಬಾಹಿರ ಎಂದು ಅಮೆರಿಕ ಸುಪ್ರೀಂಕೋರ್ಟ್‌ನ ಆರು ಮಂದಿ ನ್ಯಾಯಾಧೀಶರ ಪೀಠ ತೀರ್ಪು ನೀಡಿರುವುದು ಗಮನಾರ್ಹ. ಒಟ್ಟಿನಲ್ಲಿ ಎರಡನೆಯ ಅವಧಿಗೆ ಅಮೆರಿಕ ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಟ್ರಂಪ್ ಅತಿ ವೇಗದ ಗತಿಯಲ್ಲಿ ಕೆಲವೊಂದು ತೀರ್ಮಾನಗಳನ್ನು ಕೈಗೊಂಡು ಅವರ ವಿರೋಧಿಗಳ ಟೀಕೆ ಮತ್ತು ಟಿಪ್ಪಣಿಗಳಿಗೆ ಗುರಿಯಾಗಿದ್ದಾರೆ. ದೇಶದ ಆರ್ಥಿಕತೆಯ ದಿಸೆಯಲ್ಲಿ ಕೆಲವೊಂದು ನಿರ್ಣಯಗಳು ಅನಿವಾರ್ಯವಾಗಿದೆ.

ಕಳೆದ ಮೂವತ್ತು , ನಲವತ್ತು ವರ್ಷಗಳ ಆಡಳಿತದಲ್ಲಿ ಅಮೆರಿಕ ಅನುಸರಿಸಿದ ಸಡಿಲ ನೀತಿಗಳಿಂದ ದೇಶ ದುರ್ಬಲವಾಗಿದೆ ಎಂಬುದು ಡೊನಾಲ್ಡ್ ವಾದ. ಆದರೆ ಎರಡನೆ ಅವಧಿಯ ಟ್ರಂಪ್ ಆಡಳಿತ ವೈಖರಿ ಮತ್ತು ಧೋರಣೆಯನ್ನು ಸೂಕ್ಷ್ಮವಾಗಿ ಕಂಡಾಗ, ಇವರ ಮಾತು ಮತ್ತು ಕೃತಿಯೆರೆಡೂ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ನಿಜ.

ಭಾರತದಮೇಲೆ ವಿಧಿಸಲಾಗಿದ್ದ ಅಧಿಕ ಸುಂಕವನ್ನು ಕಡಿಮೆಗೊಳಿಸಲು ಅಮೆರಿಕ ತಾತ್ವಿಕ ಒಪ್ಪಿಗೆ ನೀಡಿರುವುದು ಸರಿಯಷ್ಟೆ. ಇದು ಭಾರತ ಮತ್ತು ಅಮೆರಿಕದ ನಡುವಣ ವಾಣಿಜ್ಯ- ವ್ಯವಹಾರಗಳಿಗೆ ಸಂಬಂಧಿಸಿದ ವಿಷಯ ಮಾತ್ರ. ಭಾರತದ ಉತ್ನನ್ನ ಗಳ ಮೇಲೆ ವಿಧಿಸಲಾದ ಅಧಿಕ ಸುಂಕವನ್ನು ಕಡಿಮೆ ಮಾಡಬೇಕೆಂದು ಭಾರತವೇನೂ ಅಮೆರಿಕಕ್ಕೆ ಪರಿಪರಿಯಾಗಿ ಬೇಡಲಿಲ್ಲ ! ಇದಕ್ಕೆ ಪರ್ಯಾಯವಾಗಿ ಯೂರೋಪ್ ಒಕ್ಕೂಟದ ದೇಶಗಳು ಮತ್ತು ಇತರೆ ಏಷ್ಯಾ ದೇಶಗಳ ನಡುವೆ ಸದೃಢ ಮತ್ತು ಸಮತೋಲಿತ ವಾಣಿಜ್ಯ ಒಪ್ಪಂದಗಳನ್ನು ಭಾರತವು ಕುದುರಿಸಿಕೊಳ್ಳುವ ದಿಟ್ಟ ಹೆಜ್ಜೆಯಿಟ್ಟಿರುವುದು ಗಮನಾರ್ಹ. ಈ ದಿಶೆಯಲ್ಲಿ ಭಾರತದ ರಾಜತಾಂತ್ರಿಕತೆ ಬಲವಾಗಿ ಕಾರ್ಯ ನಿರ್ವಹಿಸಿದೆ. ಮಿಗಿಲಾಗಿ ಭಾರತದ ಜೊತೆ ಇತರೆ ದೇಶಗಳು ಉತ್ತಮ ವಾಣಿಜ್ಯ ಸಂಬಂಧಗಳನ್ನು ಹೊಂದಲು ಆಸಕ್ತಿ ತೋರಿವೆ. ಇದನ್ನು ಮನಗಂಡ ಬಳಿಕವೇ ಅಮೆರಿಕ ತನ್ನ ದುಬಾರಿ ಸುಂಕದ ನೀತಿಯನ್ನು ಕೈ ಬಿಟ್ಟಿತೆಂಬು ಇಲ್ಲಿ ಗಮನಿಸುವಂತಹದು. ಕಟುಸತ್ಯ ಎಂದರೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ದೂರ ತಳ್ಳಿ ಅಥವಾ ನೇಪಥ್ಯಕ್ಕೆ ಸರಿಸಿ ಆರ್ಥಿಕ ಬೆಳವಣಿಗೆ ಸಾಧಿಸಲು ಸಾಧ್ಯವಿಲ್ಲ. ಈ ಸತ್ಯವು ಅಮೆರಿಕಕ್ಕೆ ತಿಳಿದಿದ್ದರೂ ಟ್ರಂಪ್ ಮಾತ್ರ ತಮ್ಮ ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳಲು ಹಿಂದೆ ಬಿದ್ದಿಲ್ಲ.

ಭಾರತದ ಮೇಲೆ ಅಧಿಕ ಸುಂಕದ ಭಾರವನ್ನು ಇಳಿಸಲು ಅಮೆರಿಕ ಬಹಳಷ್ಟು ಷರತ್ತುಗಳನ್ನು ವಿಧಿಸಿತ್ತು. ಇದರಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸ್ಥಗಿತವೂ ಒಂದು ಎಂಬ ವಿಷಯವನ್ನು ಟ್ರಂಪ್ ಪದೇ ಪದೇ ಜಾಗತಿಕ ಮಾಧ್ಯಮದ ಮುಂದೆ ಡಂಗುರ ಬಾರಿಸುವ ಪ್ರಮೇಯವಿಲ್ಲ. ಟ್ರಂಪ್ ಮತ್ತೆ ಮತ್ತೆ ಭಾರತಕ್ಕೆ ತಿರುಗೇಟು ನೀಡುವ ರೀತಿಯಲ್ಲಿ ಕೆಲವೊಂದು ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುವುದನ್ನು ಕಂಡಾಗ. ಅಮೆರಿಕಕ್ಕೆ ಭಾರತದ ಜೊತೆ ದೀರ್ಘಕಾಲದ ಸ್ನೇಹಪೂರ್ವಕ ಸಂಬಂಧಗಳ ಬಗ್ಗೆ ನಿಜವಾದ ಕಾಳಜಿ ಇದೆಯೇ ಎಂಬ ಶಂಕೆ ಮೂಡುತ್ತದೆ.

Related Posts

Leave a Reply

Your email address will not be published. Required fields are marked *