Wednesday, February 04, 2026
Menu

ಬೆಳಗಾವಿಯಲ್ಲಿ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ: ಅಪರಾಧಿಗಳಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ

ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಅಪರಾಧಿಗಳಿಗೆ ನ್ಯಾಯಾಲಯ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಬೆಳಗಾವಿ ಹೆಚ್ಚುವರಿ 10ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ.ಎಚ್.ಎಸ್.ಮಂಜುನಾಥ ಅವರು ಅಪರಾಧಿಗಳಾದ ಬಸಪ್ಪ, ರಾಜು, ಕೆಂಪಣ್ಣ, ಪಾರ್ವತಿ, ಯಲ್ಲವ್ವ, ಲಕ್ಕಪ್ಪ, ಗಂಗವ್ವ, ಸಂಗೀತಾ, ಸಂತೋಷ, ಶೋಭಾ, ಲಕ್ಕವ್ವ, ಶಿವಪ್ಪ ವನ್ನೂರಿಗೆ ಆಯಾ ಸೆಕ್ಷನ್ ಅಡಿ ಶಿಕ್ಷೆ ಮತ್ತು ದಂಡ ವಿಧಿಸಿದರು. ಕೋರ್ಟ್‌ ಶಿಕ್ಷೆ ವಿಧಿಸುತ್ತಿದ್ದಂತೆ ಅಪರಾಧಿಗಳು ಮತ್ತು ಕುಟುಂಬಸ್ಥರು ಕಣ್ಣೀರಿಟ್ಟರು.

ವಂಟಮೂರಿ ಗ್ರಾಮದಲ್ಲಿ ಪ್ರೇಮಿಗಳು ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿದ್ದರು. ಓಡಿ ಹೋಗಿದ್ದಕ್ಕೆ ಸಿಟ್ಟಾದ ಯುವತಿಯ ಕಡೆಯವರು 2023ರ ಡಿಸೆಂಬರ್ 11ರಂದು ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು. ಯುವಕನ ಮನೆಯನ್ನೂ ಧ್ವಂಸ ಮಾಡಿದ್ದರು.

ಮಹಿಳೆ ಮೇಲೆ ಹಲ್ಲೆ ನಡೆಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಪ್ರೇಮಿಗಳು ಬೆಳಗಾವಿ ನಗರದ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ವಿವಾಹವಾಗಿದ್ದರು.

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದ ಯುವಕ ಮತ್ತು ಯುವತಿ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹುಡುಗಿಯ ಮನೆಯವರು ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹುಡುಗಿಯ ಕುಟುಂಬವು ಆಕೆಗೆ ಬೇರೋಬ್ಬನ ಜೊತೆ ನಿಶ್ಚಿತಾರ್ಥ ನಿಗದಿ ಮಾಡಿತ್ತು. ಬಳಿಕ ಜೋಡಿ ಗ್ರಾಮದಿಂದ ಪರಾರಿಯಾಗಿತ್ತು.

ಮಗ ಯುವತಿಯೊಂದಿಗೆ ಓಡಿ ಹೋದ ಎಂಬ ಕಾರಣಕ್ಕೆಗ್ರಾಮದಲ್ಲಿ ಯುವಕನ ತಾಯಿಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿತ್ತು. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು. ಕರ್ನಾಟಕ ಹೈಕೋರ್ಟ್ ಘಟನೆಯನ್ನು ತೀಕ್ಷ್ಣವಾಗಿ ಖಂಡಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತ್ತು.

ರಾಷ್ಟ್ರೀಯ ಮಹಿಳಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪೊಲೀಸರು ಮತ್ತು ಸಿಐಡಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾಕತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ನಿರ್ಲಕ್ಷ್ಯಕ್ಕಾಗಿ ಅಮಾನತುಗೊಳಿಸಲಾಗಿದೆ. ಪರಾರಿಯಾಗಿದ್ದ ಜೋಡಿಯನ್ನು ಪತ್ತೆ ಹಚ್ಚಿದ ಪೊಲೀಸರು ಮದುವೆ ಮಾಡಿಸಿದ್ದರು

Related Posts

Leave a Reply

Your email address will not be published. Required fields are marked *