Wednesday, February 04, 2026
Menu

ಹೆಚ್‌ಡಿ ಕುಮಾರಸ್ವಾಮಿ ಮನವಿಗೆ ವಿತ್ತ ಸಚಿವೆ ಸ್ಪಂದನೆ: ಶೇ18 ತಂಬಾಕು ಅಬಕಾರಿ ಸುಂಕ ವಾಪಸ್‌

hd kumaraswamy

ಕೇಂದ್ರ ಸಚಿವ ಹೆಚ್‌ಡಿ  ಕುಮಾರಸ್ವಾಮಿ ಅವರ ಮನವಿಗೆ ಪ್ರತಿಕ್ರಿಯಿಸಿರುವ ಕೇಂದ್ರ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು  ತಂಬಾಕು ಮೇಲೆ ವಿಧಿಸಲಾಗಿದ್ದ ಶೇ 18ರ ಅಬಕಾರಿ ಸುಂಕ ವಾಪಸ್‌ ಪಡೆದಿದ್ದಾರೆ.

ತಂಬಾಕಿನ ಮೇಲೆ ಶೇ 18 ಅಬಕಾರಿ ಸುಂಕ ವಿಧಿಸಿದ್ದರಿಂದ ಖರೀದಿದಾರರು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರವೇ ಉಳಿದಿದ್ದರು. ಇದರಿಂದ ಬೆಳೆದ ಬೆಳೆ ಮಾರಾಟವಾಗದೆ ರಾಜ್ಯದ ಹುಣಸೂರು, ಪಿರಿಯಾಪಟ್ಟಣ, ಹೆಚ್.ಡಿ. ಕೋಟೆ, ಅರಕಲಗೂಡು ಸೇರಿದಂತೆ ವಿವಿಧ ಭಾಗಗಳಲ್ಲಿನ ತಂಬಾಕು ಬೆಳೆಗಾರರು  ಸಂಕಷ್ಟಕ್ಕೆ ಗುರಿಯಾಗಿದ್ದರು.

ಬೆಳೆಗಾರರು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ  ಸಂಕಷ್ಟ ತೋಡಿಕೊಂಡಿದ್ದರು. ಈ ಸಂಬಂಧ ಸಚಿವರು ಬೆಂಗಳೂರಿನ ತಂಬಾಕು ಮಂಡಳಿ ವ್ಯಸ್ಥಾಪಕ ನಿರ್ದೇಶಕರು ಮತ್ತು ವಿಶಾಖಪಟ್ಟಣ ವಿಭಾಗದ ಕೇಂದ್ರೀಯ ಅಬಕಾರಿ ಮತ್ತು ಜಿಎಸ್ಟಿ ಮುಖ್ಯ ಆಯುಕ್ತರ ಜತೆ ನಡೆಸಲಾಗಿದ್ದ ಪತ್ರ ವ್ಯವಹಾರಗಳ ಕುರಿತ ಎಲ್ಲಾ ಮಾಹಿತಿಯನ್ನೂ ಪಡೆದುಕೊಂಡಿದ್ದರು.  ಸಚಿವರು ಈ ವಿಷಯವನ್ನು ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರ ಗಮನಕ್ಕೆ ತಂದು, ತಂಬಾಕು ಮೇಲಿನ ಅಬಕಾರಿ ಸುಂಕವನ್ನು ರದ್ದು ಮಾಡಬೇಕು ಎಂದು ವಿನಂತಿಸಿದ್ದರು.  ಮನವಿಗೆ  ಸ್ಪಂದಿಸಿರುವ ವಿತ್ತ ಸಚಿವರು, ತಂಬಾಕು ಮೇಲಿನ ಅಬಕಾರಿ ಸುಂಕ ವಿನಾಯಿತಿ ನಿರ್ಧಾರವನ್ನು ಕೈಗೊಂಡಿದ್ದಾರೆ.

ಫೆಬ್ರವರಿ 1ರಂದು ಆದೇಶ ಹೊರಡಿಸಿರುವ ತಂಬಾಕು ಮಂಡಳಿಯು ತಕ್ಷಣದಿಂದಲೇ ಜಾರಿಗೆ ಬರುವಂತೆ ಅಬಕಾರಿ ಸುಂಕವನ್ನು ಹಿಂಪಡೆಯಲಾಗಿದೆ ಹಾಗೂ ಫೆಬ್ರವರಿ 5ರಿಂದಲೇ ಹರಾಜು ಪ್ರಕ್ರಿಯೆ ಆರಂಭ ಮಾಡುವಂತೆ ನಿರ್ದೇಶನ ನೀಡಿದೆ.

ತಂಬಾಕು ಹರಾಜು ವಿಷಯಕ್ಕೆ ಸಂಬಂಧಿಸಿ ತಮ್ಮ ಮನವಿಗೆ ಸ್ಪಂದಿಸಿ ಬೆಳೆಗಾರರ ಪರವಾಗಿ ಕ್ರಮ ವಹಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕುಮಾರಸ್ವಾಮಿ  ಧನ್ಯವಾದ ತಿಳಿಸಿದ್ದಾರೆ. ಈ ನಿರ್ಧಾರದಿಂದ ತಂಬಾಕು ಬೆಳೆಗಾರರರಿಗೆ ದೊಡ್ಡ ಮಟ್ಟದಲ್ಲಿ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ನನ್ನೊಂದಿಗೆ ಹುಣಸೂರು ಶಾಸಕ ಜಿ.ಡಿ. ಹರೀಶ್‌ ಗೌಡ, ಅರಕಲಗೂಡು ಶಾಸಕ ಎ. ಮಂಜು, ಪಿರಿಯಾಪಟ್ಟಣ ಮಾಜಿ ಶಾಸಕ ಮಹದೇವು ಹಾಗೂ ಹೆಚ್.ಡಿ. ಕೋಟೆಯ ಜೆಡಿಎಸ್‌  ಹಿರಿಯ ಮುಖಂಡ ಕೃಷ್ಣ ನಾಯಕ್‌ ಮುಂತಾದವರು ಚರ್ಚೆ ನಡೆಸಿದ್ದರು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ತಂಬಾಕು ಮೇಲೆ ಅಬಕಾರಿ ಸುಂಕ ಮತ್ತು ಜಿಎಸ್‌ಟಿ ದರ ಏರಿಕೆ ವಿರೋಧಿಸಿ ತಂಬಾಕು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿರಲು ಖರೀದಿ ಕಂಪನಿಗಳು ನಿರ್ಧರಿಸಿದ್ದವು. ಇದರಿಂದ ಹರಾಜು ಪ್ರಕ್ರಿಯೆ ಸ್ಥಗಿತಗೊಂಡು ಮಾರುಕಟ್ಟೆ ಬಂದ್ ಆಗಿದ್ದವು. ರೈತರು  ಸಂಕಷ್ಟಕ್ಕೆ  ಒಳಗಾಗಿದ್ದರು.

ಖರೀದಿ ಕಂಪನಿಗಳು ತಮ್ಮ ಮೇಲೆ ವಿಧಿಸಿರುವ ಅನುತ್ಪಾದಕ ತಂಬಾಕಿಗೆ ಅಬಕಾರಿ ಸುಂಕ ಹಾಗೂ ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಏರಿಕೆಯ ಹಿನ್ನಲೆಯಲ್ಲಿ ತಂಬಾಕು ಖರೀದಿ ಕಂಪನಿಗಳು ತಾತ್ಕಾಲಿಕವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳ ದಿರಲು ನಿರ್ಧರಿಸಿವೆ. ಇದರಿಂದಾಗಿ ಮಾರುಕಟ್ಟೆ ಬಂದ್ ಆಗಿದ್ದು, ರೈತರು ಕಷ್ಟಪಟ್ಟು ಬೆಳೆದ ತಂಬಾಕು ಒಣಗುತ್ತಿದೆ. ದಿನದಿನಕ್ಕೂ ಬೆಲೆ ಈಲಿಮುಖವಾಗುತ್ತುದೆ. ಈ ನಡುವೆ ಹರಾಜು ಪ್ರಕ್ರಿಯೆಯಲ್ಲಿ ತಾತ್ಕಾಲಿಕವಾಗಿ ಭಾಗವಹಿಸುವುದಿಲ್ಲವೆಂದು ಖರೀದಿದಾರರು ಘೋಷಿಸಿದ್ದರು. ಬೆಳೆಗಾರರು ತೊಂದರೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಸಚಿವ ಕುಮಾರಸ್ವಾಮಿ ಅವರು ಮಧ್ಯ ಪ್ರವೇಶಿದರು.

ನನ್ನ ಮನವಿಗೆ ಸ್ಪಂದಿಸಿದ ವಿತ್ತ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹರಾಜು ಪ್ರಕ್ರಿಯೆ ಆರಂಭವಾಗಿ ತಂಬಾಕು ಬೆಳೆಗಾರರಿಗೆ ಅನುಕೂಲ ಆಗುತ್ತಿರುವುದು ಸಂತೋಷದ ಸಂಗತಿ. ನರೇಂದ್ರ ಮೋದಿ ಅವರ ಸರಕಾರ ಸದಾ ರೈತಪರ ಎನ್ನುವುದಕ್ಕೆ ಈ ಕ್ರಮವು ಉತ್ತಮ ಉದಾಹರಣೆ ಆಗಿದೆ ಎಂದು  ಕುಮಾರಸ್ವಾಮಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *