Menu

Union Budget 2026-27: ಕ್ಯಾನ್ಸರ್‌ ಮತ್ತು ಅಪರೂಪದ ಕಾಯಿಲೆಗಳ ಔಷಧಿ ಕಸ್ಟಮ್ಸ್ ಸುಂಕ ರದ್ದು

ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳ ಮೇಲಿನ ಮೂಲ ಸುಂಕವನ್ನು ಈ ಬಾರಿಯ ಬಜೆಟ್‌ನಲ್ಲಿ  ಸಂಪೂರ್ಣವಾಗಿ ರದ್ದುಗೊಳಿಸಿರುವುದರಿಂದ ರೋಗಿಗಳಿಗೆ ಅವುಗಳ ಮೇಲಿನ ವೆಚ್ಚದಲ್ಲಿ ತುಸು ಹೊರೆ ಕಮ್ಮಿ ಆಗಲಿದೆ. 17 ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿ ಮತ್ತು ಏಳು ಅಪರೂಪದ ಕಾಯಿಲೆಗಳಿಗೆ ಔಷಧಿಗಳ ಮೇಲಿನ ಸುಂಕ ವಿನಾಯಿತಿ ಸಿಗಲಿದೆ.

ಮಿತ್ರ ಆರೋಗ್ಯ ವೃತ್ತಿಪರರಿಗೆ ಈಗ ಇರುವ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಹೊಸ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು. ಐದು ವರ್ಷಗಳಲ್ಲಿ 1 ಲಕ್ಷ ಮಿತ್ರ ಆರೋಗ್ಯ ವೃತ್ತಿಪರರಿಗೆ ಆಪ್ಟೋಮೆಟ್ರಿ, ರೇಡಿಯಾಲಜಿ, ಅರಿವಳಿಕೆ ಮತ್ತು ಅನ್ವಯಿಕ ಮನೋವಿಜ್ಞಾನದಂತಹ ವಿಭಾಗಗಳಲ್ಲಿ ತರಬೇತಿ ಸಿಗಲಿದೆ. ಹಿರಿಯರ ಆರೈಕೆ ಮತ್ತು ಸಂಬಂಧಿತ ಸೇವೆಗಳನ್ನು ಬಲಪಡಿಸಲು, 1.5 ಲಕ್ಷ ಬಹು-ಕೌಶಲ್ಯ ಹೊಂದಿರುವ ಆರೈಕೆದಾರರಿಗೆ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು ಕಾರ್ಯಕ್ರಮಗಳ ಮೂಲಕ ತರಬೇತಿ ನೀಡಲಾಗುವುದು ಎಂದು ಸಚಿವೆ  ನಿರ್ಮಲಾ ಸೀತಾರಾಮನ್‌   ತಿಳಿಸಿದ್ದಾರೆ.

ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ, ಆಯುಷ್ ಔಷಧಾಲಯಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸುವುದು,  ಹೊಸ ತುರ್ತು ಮತ್ತು ಆಘಾತ ಆರೈಕೆ ಕೇಂದ್ರಗಳ ಮೂಲಕ ಜಿಲ್ಲಾ ಆಸ್ಪತ್ರೆಗಳ ಸಾಮರ್ಥ್ಯವನ್ನು ಶೇ. 50 ಹೆಚ್ಚಿಸುವುದು, ಉತ್ತರಪ್ರದೇಶದಲ್ಲಿ ಎರಡು ನಿಮ್ಮಾನ್ಸ್‌ ಸ್ಥಾಪನೆಯಾಗಲಿದೆ ಎಂದು ಘೋಷಿಸಿದ್ದಾರೆ.

ಕೆಲವೊಂದು ವಸ್ತುಗಳ ಮೇಲಿನ ಸುಂಕ ರದ್ದು ಹಾಗೂ ಕೆಲವು ವಸ್ತುಗಳ ಮೇಲಿನ ಸುಂಕ ಇಳಿಕೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದ್ದು, ಅವುಗಳ ಬೆಲೆಯಲ್ಲಿ ಅಲ್ಪ ಪ್ರಮಾಣ ಇಳಿಕೆಯಾಗಲಿದೆ. ಮೈಕ್ರೋವೇವ್ ಓವನ್‌ ಮೇಲಿನ ಮೂಲ ಸುಂಕವನ್ನು ರದ್ದುಗೊಳಿಸಿರುವುದರಿಂದ ಬೆಲೆ ತಗ್ಗಲಿದೆ.

ಸೋಲಾರ್‌ ಗ್ಲಾಸ್‌ ಮತ್ತು ಇಂಧನ ಪರಿವರ್ತನಾ ಉಪಕರಣಗಳ ತಯಾರಿಕೆಗೆ ಬಳಸುವ ವಸ್ತುಗಳ ಮೇಲಿನ ಸುಂಕವನ್ನು ತೆಗೆದುಹಾಕಿರುವುದರಿಂದ ಬೆಲೆ ಇಳಿಕೆ ನಿರೀಕ್ಷಿಸಬಹುದಾಗಿದೆ. ವಿಮಾನಗಳ ತಯಾರಿಕೆಗೆ ಬೇಕಾದ ಬಿಡಿಭಾಗಗಳು ಮತ್ತು ಘಟಕಗಳ ಮೇಲಿನ ಕಸ್ಟಮ್ಸ್ ಸುಂಕ ರದ್ದುಗೊಂಡಿದೆ. ಕೆಲವೊಂದು ಖನಿಜಗಳು ಮತ್ತು ಆಲ್ಕೋಹಾಲ್ ಲಿಕ್ಕರ್ ಸ್ಕ್ರ್ಯಾಪ್ ಮೇಲಿನ ಸುಂಕವನ್ನು ಶೇ 5 ರಿಂದ ಶೇ೨ಕ್ಕೆ ತಗ್ಗಿಸಲಾಗಿದೆ.

ಭಾರತೀಯ ಮೀನುಗಾರರು ಭಾರತೀಯ ಜಲಪ್ರದೇಶದಲ್ಲಿ ಹಿಡಿದ ಮೀನುಗಳ ಮೇಲಿನ ಸುಂಕವನ್ನು ರದ್ದುಗೊಳಿಸಲಾಗಿದೆ. ಪರಮಾಣು ವಿದ್ಯುತ್ ಸ್ಥಾವರಗಳಿಗಾಗಿ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಸುಂಕ ರದ್ದುಗೊಂಡಿದೆ. ಶೂಗಳ ಮೇಲ್ಭಾಗದ ರಫ್ತಿಗಾಗಿ ಬಿಡಿಭಾಗಗಳನ್ನು ಸುಂಕವಿಲ್ಲದೆ ಆಮದು ಮಾಡಿಕೊಳ್ಳಲು ಅನುಮತಿ ಕಲ್ಪಿಸಲಾಗಿದೆ.

Related Posts

Leave a Reply

Your email address will not be published. Required fields are marked *