Menu

ಮೈಸೂರು: ಸಂಪಾದಿಸಿದ ಹಣವನ್ನೇ ಕೊಡದ ಪತ್ನಿ ಕೊಲೆಗೆ ಸುಪಾರಿ ನೀಡಿದ ಪತಿ!

ಗಂಡನೊಬ್ಬತಾನು ದುಡಿದು ಸಂಪಾದಿಸಿದ ಹಣವನ್ನು ಹೆಂಡತಿ ತನಗೆ ಕೊಡುತ್ತಿಲ್ಲವೆಂದು ಆಕೆಯನ್ನು  ಕೊಲ್ಲಲು ಸುಪಾರಿ ನೀಡಿರುವ ಪ್ರಕರಣ ಮೈಸೂರಿನ ಬಿಎಂಶ್ರೀ ನಗರದಲ್ಲಿ ನಡೆದಿದೆ. ಗಂಡನ ಈ ಕೃತ್ಯಕ್ಕೆ ಆತನ ಸ್ನೇಹಿತರು ಸಹಕರಿಸಿದ್ದು, ಮೇಟಗಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಮಹೇಶ್, ಪತ್ನಿ ನಾಗರತ್ನ ಕೊಲೆಗೆ 5 ಲಕ್ಷ ರೂ. ಸುಪಾರಿ ನೀಡಿದ್ದ. ಗಂಡನ ಸಂಪಾದನೆಯನ್ನು ಬಡ್ಡಿಗೆ ಬಿಡುತ್ತಿದ್ದ ಪತ್ನಿಯು ಮಹೇಶ್‌ಗೆ ಹಣ ನೀಡುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಮಹೇಶ್, ತನಗೆ ಕಿಂಚಿತ್ತೂ ಮರ್ಯಾದೆ ಕೊಡದ ಪತ್ನಿಯ ಕೊಲೆಗೆ ಸ್ಕೆಚ್​ ಹಾಕಿದ್ದ. ಮನೆಗೆ ನುಗ್ಗಿ ಗ್ಯಾಸ್ ಪೈಪ್ ಕತ್ತರಿಸಿ ಪೆಟ್ರೋಲ್ ಸುರಿದು ಹೆಂಡತಿಯನ್ನು ಮುಗಿಸಬೇಕು ಎಂಬ ಪ್ಲಾನ್ ರೂಪಿಸಿದ್ದ.

ಅದರಂತೆ ವಿರಾಜಪೇಟೆಯ ಭಾಸ್ಕರ್ ಮತ್ತು ಅಭಿಷೇಕ್ ಎನ್ನುವವರು ನಾಗರತ್ನ ಒಬ್ಬರೇ ಇರುವ ಸಮಯ ನೋಡಿಕೊಂಡು ಮನೆಗೆ ಬಂದಿದ್ದರು. ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆಗೆ ಯತ್ನಿಸಿ ನಂತರ ಗ್ಯಾಸ್ ಸಿಲಿಂಡರ್‌ ಸೋರಿಕೆ ಮಾಡಿದ ಆರೋಪಿಗಳು ಅಗ್ನಿ ಆಕಸ್ಮಿಕ ಎಂದು ಬಿಂಬಿಸಲು ಯತ್ನಿಸಿದ್ದರು. ಮನೆಯ ಹಲವು ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಗಾಯಗೊಂಡ ನಾಗರತ್ನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸ್ನೇಹಿತರಿಗೆ ಸುಪಾರಿ ಕೊಟ್ಟಿದ್ದ ಮಹೇಶ್ ಸೇರಿದಂತೆ ಕೊಲೆಗೆ ಯತ್ನಿಸಿದ್ದ ಆರೋಪಿಗಳನ್ನು ಮೇಟಗಳ್ಳಿ ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಗಂಡನೇ ಪತ್ನಿಯನ್ನು ಕೊಲ್ಲುವಂತೆ ಸುಪಾರಿ ನೀಡಿದ್ದ ವಿಚಾರ ಬಹಿರಂಗವಾಗಿದೆ.

ವೈದ್ಯರ ಮೇಲೆ ತಂದೆ-ಮಗ ಹಲ್ಲೆ

ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ವೈದ್ಯರ ಮೇಲೆ ತಂದೆ ಹಾಗೂ ಮಗ ಹಲ್ಲೆ ನಡೆಸಿದ್ದಾರೆ. ಶಿಶು ಆಸ್ಪತ್ರೆಯ ವೈದ್ಯ ಡಾ. ಅನೂಪ್ ಮೇಲೆ ರುಬಿಯಾಜ್ ಷರೀಫ್ ಹಾಗೂ ಆತನ ತಂದೆ ಹಲ್ಲೆ ನಡೆಸಿದ್ದಾರೆ.

ಮೂರು ವರ್ಷದ ಮಗುವನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ರುಬಿಯಾಜ್ ಷರೀಫ್, ಚಪ್ಪಲಿ ಧರಿಸಿಕೊಂಡೇ ಕ್ಲಿನಿಕ್ ಒಳಗೆ ಪ್ರವೇಶಿಸಿದ್ದನು. ಚಪ್ಪಲಿ ಹೊರಗೆ ಬಿಡುವಂತೆ ವೈದ್ಯರು ಮನವಿ ಮಾಡಿದಾಗ ಮಾತಿನ ಚಕಮಕಿ ನಡೆದಿದೆ. ತಾನೂ ಚಪ್ಪಲಿ ಹೊರಗೆ ಬಿಟ್ಟಿದ್ದನ್ನು ತೋರಿಸಲು ವೈದ್ಯರು ಹೊರಗೆ ಬಂದಾಗ ಹಲ್ಲೆ ನಡೆಸಲಾಗಿದೆ. ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *