ಮಾಜಿ ಸಭಾಪತಿಗಳು ಮತ್ತು ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರಿಗೆ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕನ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.
ಇದು ಅತ್ಯಂತ ಅರ್ಹ, ಸೂಕ್ತ ಹಾಗೂ ಯೋಗ್ಯ ಆಯ್ಕೆ, ಇದರಿಂದ ಡಾಕ್ಟರೇಟ್ ನ ಮೌಲ್ಯ ವೃದ್ಧಿಸುತ್ತದೆ. ಸಾಮಾಜಿಕ ಬದ್ಧತೆಯ ಧೀಮಂತ, ಅವರು ಸದನ ನಡೆಸುತ್ತಿದ್ದ ವೈಖರಿಯೇ ಅಪೂರ್ವ ಎಂಬ ಮೆಚ್ಚುಗೆಯ ಮಾತುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಕಾಗೋಡು ತಿಮ್ಮಪ್ಪ 10 ಸೆಪ್ಟೆಂಬರ್ 1932 ರಲ್ಲಿ ಸಾಗರದ ಕಾಗೋಡುವಿನಲ್ಲಿ ಜನಿಸಿದರು. ತಂದೆ ಸಾವಜಿ ಬೀರ ನಾಯ್ಕ ಮತ್ತು ತಾಯಿ ಬೈರಮ್ಮ. ಪ್ರಾಥಮಿಕ ಶಿಕ್ಷಣವನ್ನು ಹಿರೇನಲ್ಲೂರಿನಲ್ಲಿ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಬಿ.ಕಾಂ., ಬಿ.ಎಲ್ ಪದವಿ ಪಡೆದರು. ಸಾಗರದಲ್ಲಿ ಕೆಲಕಾಲ ವಕೀಲರಾಗಿ ಕೆಲಸ ಮಾಡಿದರು. ತಿಮ್ಮಪ್ಪ ವೃತ್ತಿಯಲ್ಲಿ ಕೃಷಿಕರು. ಡಾ. ರಾಮ ಮನೋಹರ ಲೋಹಿಯಾ , ಜಾರ್ಜ್ ಫರ್ನಾಂಡಿಸ್ , ಗೋಪಾಲ ಗೌಡ ಮತ್ತು ಇತರ ಸಮಾಜವಾದಿ ನಾಯಕರ ರಾಜಕೀಯ ಪ್ರಭಾವಕ್ಕೆ ಒಳಗಾಗಿದ್ದರು.
ಮೇ 2013 ರಲ್ಲಿ 14 ನೇ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. 2016 ಮತ್ತು 2018 ರ ನಡುವೆ ಸಿದ್ದರಾಮಯ್ಯ ಸಂಪುಟದಲ್ಲಿ ಕಂದಾಯ ಮತ್ತು ಮುಜರಾಯಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1980 ರಲ್ಲಿ ಐದನೇ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.