ಇರಾನ್- ಇಸ್ರೇಲ್ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆಯೇ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿ, ಎಚ್ಚರಿಕೆ ನೀಡಿದೆ, ಈ ಬೆಳವಣಿಗೆ ಬಳಿಕ ಅಮೆರಿಕ ಇರಾನ್ ನಡುವೆ ಉದ್ವಿಗ್ನತೆ ಭುಗಿಲೆದ್ದಿದೆ. ಸಹಾಯಕ್ಕಾಗಿ ಇರಾನ್ ರಷ್ಯಾದ ಮೊರೆ ಹೋಗಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ತೆರಳಿದ್ದಾರೆ.
ಕೆಲವು ವರ್ಷಗಳಲ್ಲಿ ರಷ್ಯಾದೊಂದಿಗಿನ ಇರಾನ್ನ ಮಿಲಿಟರಿ ಮತ್ತು ಕಾರ್ಯತಂತ್ರದ ಸಹಕಾರವು ಹೆಚ್ಚು ಗಟ್ಟಿಯಾಗಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇರಾನ್ ರಷ್ಯಾವನ್ನು ಸಂಪರ್ಕಿಸುವುದು ಇದೇ ಮೊದಲಲ್ಲ. ಪುಟಿನ್ ಮತ್ತು ಅಬ್ಬಾಸ್ ಅರಗ್ಚಿ ನಡುವಿನ ಸಭೆಯಲ್ಲಿ ಅಮೆರಿಕದ ಮಿಲಿಟರಿ ಕ್ರಮಗಳು, ಪಶ್ಚಿಮ ಏಷ್ಯಾದ ಪರಿಸ್ಥಿತಿ ಮತ್ತು ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಅಂಶಗಳ ಬಗ್ಗೆಯೂ ಚರ್ಚಿಸಬಹುದು ಎಂದು ಹೇಳಲಾಗುತ್ತಿದೆ.
ಇರಾನ್ನ ಪರಮಾಣು ನೆಲೆಗಳ ಮೇಲೆ ದಾಳಿ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಮಾತನಾಡುವ ಯಾವುದೇ ಯೋಜನೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸದ್ಯಕ್ಕೆ ಇಲ್ಲ ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ. ಇರಾನ್ನ ಪರಮಾಣು ಯೋಜನೆಯನ್ನು ನಾಶಮಾಡುವ ಗುರಿಯೊಂದಿಗೆ ಅಮೆರಿಕ ಇರಾನ್ನ ಫೋರ್ಡೊ, ಇಸ್ಫಹಾನ್ ಮತ್ತು ನಟಾಂಜ್ ಪರಮಾಣು ನೆಲೆಗಳ ಮೇಲೆ ದಾಳಿ ಮಾಡಿತ್ತು. ಬಳಿಕ ಹಲವಾರು ದೇಶಗಳು ಇರಾನ್ಗೆ ಪರಮಾಣು ಸಿಡಿತಲೆಗಳನ್ನು ಪೂರೈಸಲು ಸಿದ್ಧವಾಗಿವೆ ಎಂದು ಡಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಅಮೆರಿಕದ ಸಶಸ್ತ್ರ ನೇರ ಹಸ್ತಕ್ಷೇಪವು ಜಾಗತಿಕ ಪ್ರಕ್ಷುಬ್ಧತೆಯನ್ನು ಹೆಚ್ಚಿಸುತ್ತದೆ. ಹಲವು ದೇಶಗಳು ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಹೈಪರ್ಸಾನಿಕ್ ಕ್ಷಿಪಣಿಗಳನ್ನು ಉತ್ಪಾದಿಸಲು ಯೋಚಿಸುತ್ತವೆ ಎಂದು ರಷ್ಯಾದ ಹಿರಿಯ ಸಂಸದರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ. ಅಮೆರಿಕದ ಈ ಹಸ್ತಕ್ಷೇಪವು ಬಹಿರಂಗವಾಗಿ ಗುಂಪುಗಳ ಸೃಷ್ಟಿಗೆ ಕಾರಣವಾಗುತ್ತದೆ ಎಂದು ರಷ್ಯಾದ ಫೆಡರೇಶನ್ ಕೌನ್ಸಿಲ್ನ ಅಂತಾರಾಷ್ಟ್ರೀಯ ವ್ಯವಹಾರಗಳ ಸಮಿತಿಯ ಉಪಾಧ್ಯಕ್ಷ ಆ್ಯಂಡ್ರೆ ಕ್ಲಿಮೋವ್ ಹೇಳಿದ್ದಾರೆ.