Menu

ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿಗೆ 16 ಮಂದಿ ಬಲಿ: ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ

ದಕ್ಷಿಣ ಲೆಬನಾನ್‌ನ ಹಲವೆಡೆ ಇಸ್ರೇಲ್‌ ನಡೆಸಿರುವ ದಾಳಿಗಳಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ, ಈ ಭಾಗದಲ್ಲಿ ತೀವ್ರ ಯುದ್ಧ ನಡೆಯುತ್ತಿದೆ ಎಂದು ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಸಂಘಟನೆ ಹೇಳಿದೆ.

ಈ ಸಂಘರ್ಷ ಭುಗಿಲೆದ್ದ ಕಾರಣ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಬೇಕಿದ್ದ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ. ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಭೀತಿ ಎದುರಾಗಿದೆ.

ಇಸ್ರೇಲ್ ರಕ್ಷಣಾ ಪಡೆಗಳು ದಕ್ಷಿಣ ಲೆಬನಾನ್‌ನ ತೈರ್ ನಗರದ ಜಬಲ್ ಅಮೆಲ್ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿವೆ. ಆಸ್ಪತ್ರೆ ಸಮೀಪದ ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಈಗಾಗಲೇ ಆಗಿರುವ ಒಪ್ಪಂದದ ಪ್ರಕಾರ ಲೆಬನಾನ್ ಸೇರಿದಂತೆ ಸಂಘರ್ಷ ಪೀಡಿತ ಎಲ್ಲಾ ಪ್ರದೇಶಗಳಲ್ಲಿ ತಕ್ಷಣದ ಕದನ ವಿರಾಮ ಜಾರಿಯಾಗಬೇಕು ಹಾಗೂ ಲೆಬನಾನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವ ಕಾಪಾಡಬೇಕು. ಆದರೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಿಜ್ಬುಲ್ಲಾ ಬೆದರಿಕೆ ಸಂಪೂರ್ಣವಾಗಿ ನಿವಾರಣೆಯಾಗುವವರೆಗೆ ಲೆಬನಾನ್‌ನಿಂದ ಇಸ್ರೇಲ್ ಸೇನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನೇತೃತ್ವದಲ್ಲಿ ನಡೆಯಬೇಕಿದ್ದ ಸಭೆಗೆ ಸಂಬಂಧಿಸಿದಂತೆ ಅವರ ಸ್ವಿಟ್ಜರ್‌ಲ್ಯಾಂಡ್ ಪ್ರವಾಸವನ್ನು ಮುಂದೂಡಿಕೆಯಾಗಿದೆ. ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಇರಾನ್ ತನ್ನ ನಿಯೋಗ ಕಳುಹಿಸುವುದನ್ನು ವಿಳಂಬ ಮಾಡಿದೆ ಎನ್ನಲಾಗುತ್ತಿದೆ.

ಫ್ರಾನ್ಸ್ ಅಧ್ಯಕ್ಷ ಇಮ್ಮಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ನಡುವೆ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಒಪ್ಪಂದ ತಕ್ಷಣದಿಂದಲೇ ಜಾರಿಗೊಂಡಿದೆ. ಒಪ್ಪಂದದ ಬಳಿಕ ಮಾತನಾಡಿದ್ದ ಜೆಡಿ ವ್ಯಾನ್ಸ್, ಈ ಕ್ಷಣದಲ್ಲಿ ಇಸ್ರೇಲ್ ಪರ ಸಹಾನುಭೂತಿ ಹೊಂದಿರುವ ಏಕೈಕ ರಾಷ್ಟ್ರ ನಾಯಕ ಟ್ರಂಪ್ ಎಂದು ಹೇಳುವ ಮೂಲಕ ಇಸ್ರೇಲ್‌ಗೆ ಪರೋಕ್ಷ ಎಚ್ಚರಿಕೆ ನೀಡಿದ್ದರು.

Related Posts

Leave a Reply

Your email address will not be published. Required fields are marked *