ಕಿಡ್ನ್ಯಾಪ್ ನಾಟಕ ತಂದೆಗೆ 90 ಲಕ್ಷ ರೂ. ಬೇಡಿಕೆ: ಪೊಲೀಸರ ಖೆಡ್ಡಾದಲ್ಲಿ ಖದೀಮ ಮಗ!
ಬೆಂಗಳೂರು: ಸ್ವಂತ ತಂದೆಯಿಂದಲೇ ಕೋಟ್ಯಂತರ ರೂಪಾಯಿ ಹಣ ಪೀಕಲು ಮಗನೇ ತನ್ನ ಅಪಹರಣದ (Kidnap) ನಾಟಕವಾಡಿ, ತಂದೆಗೆ 90 ಲಕ್ಷ ರೂಪಾಯಿ ಬೇಡಿಕೆಯಿಟ್ಟಿದ್ದ ರೋಚಕ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕಾರ್ಯಾಚರಣೆ ನಡೆಸಿದ ರಾಜರಾಜೇಶ್ವರಿನಗರ (RRNagar) ಠಾಣೆ ಪೊಲೀಸರು ಆರೋಪಿ ಮಗ ಹಾಗೂ ಆತನ ಸಹಚರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮನೀಷ್ (40) ಎಂದು ಗುರುತಿಸಲಾಗಿದೆ.
ಆರೋಪಿ ಮನೀಷ್, ತನ್ನ ತಂದೆ ಮನೋಹರ್ ಪಟೇಲ್ (62) ಅವರನ್ನು ಯಾಮಾರಿಸಲು ಬೃಹತ್ ಸ್ಕೇಚ್ ಹಾಕಿದ್ದ. ವ್ಯವಹಾರದ ನೆಪದಲ್ಲಿ ಗದಗಕ್ಕೆ ರೈಲಿನಲ್ಲಿ ಹೋಗುವುದಾಗಿ ತಂದೆಗೆ ತಿಳಿಸಿ ಮನೆ ತೊರೆದಿದ್ದ ಮನೀಷ್, ಮರುದಿನ ಬೆಳಿಗ್ಗೆ ಕರೆ ಮಾಡುವುದಾಗಿ ಹೇಳಿದ್ದ. ಆದರೆ ಬೆಳಿಗ್ಗೆ ಆತನ ಸ್ನೇಹಿತರ ಮೂಲಕ ತನ್ನದೇ ಮೊಬೈಲ್ ಸಂಖ್ಯೆಯಿಂದ ತಂದೆಗೆ ವಾಟ್ಸಾಪ್ (WhatsApp) ಕರೆ ಮಾಡಿಸಿದ್ದ.”ನಿಮ್ಮ ಮಗನನ್ನು ನಾವು ಅಪಹರಿಸಿದ್ದೇವೆ, ಆತನನ್ನು ಜೀವಂತವಾಗಿ ಬಿಡಬೇಕಾದರೆ ತಕ್ಷಣ 90 ಲಕ್ಷ ರೂಪಾಯಿ ನೀಡಬೇಕು” ಎಂದು ಕರೆ ಮಾಡಿದವರು ತಂದೆಗೆ ಬೆದರಿಕೆ ಹಾಕಿದ್ದರು. ಇದರಿಂದ ತೀವ್ರ ಆತಂಕಗೊಂಡ ಮನೋಹರ್ ಪಟೇಲ್ ತಡಮಾಡದೇ ಆರ್ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹಾಸನದ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಮಗ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಮನೀಷ್ ಮೊಬೈಲ್ ಸಂಖ್ಯೆಯನ್ನು ಟ್ರ್ಯಾಕ್ ಮಾಡಲು ಆರಂಭಿಸಿದರು. ಆರಂಭದಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ದೂರುದಾರ ತಂದೆಗೆ ಕರೆ ಮಾಡಿ “ಹಣ ರೆಡಿಯಾಯ್ತಾ?” ಎಂದು ವಿಚಾರಿಸಲಾಯಿತು.ಈ ಕರೆಯ ಲೋಕೇಶನ್ ಆಧರಿಸಿ ಪೊಲೀಸರು ಹಾಸನ ಭಾಗದಲ್ಲಿ ತೀವ್ರ ಹುಡುಕಾಟ ನಡೆಸಿದರು. ಕೊನೆಗೆ ಹಾಸನದ ಖಾಸಗಿ ಕೊಠಡಿಯೊಂದರಲ್ಲಿ ಮನೀಷ್ ತನ್ನ ಇಬ್ಬರು ಸಹಚರರೊಂದಿಗೆ ಆರಾಮವಾಗಿ ಮಲಗಿರುವುದು ಪತ್ತೆಯಾಗಿದೆ. ಕೂಡಲೇ ಪೊಲೀಸರು ಮನೀಷ್ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.
ಸದ್ಯ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನೀಷ್ ಈ ರೀತಿ ಸುಳ್ಳು ಅಪಹರಣದ ನಾಟಕವಾಡಲು ಕಾರಣವೇನು? ಸಾಲದ ಬಾಧೆಯೇ ಅಥವಾ ಬೇರೇನಾದರೂ ಉದ್ದೇಶವಿತ್ತೇ ಎಂಬುದರ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
#Bengaluru #RRNagar #BengaluruPolice #CrimeNews #KarnatakaNews #Udayakala #FakeKidnap #BengaluruCrime #WhatsAppRansom #KannadaNews


