Menu

ಮಹಿಳೆಯ ನಗ್ನ ವೀಡಿಯೊ, ಬ್ಲ್ಯಾಕ್‌ಮೇಲ್‌: ಪ್ರಜ್ವಲ್‌ ರೇವಣ್ಣ ಕೇಸ್‌ನಲ್ಲಿ ಎಸ್‌ಐಟಿಗೆ ಹೈಕೋರ್ಟ್‌ ನೋಟಿಸ್‌

prajwal revanna

ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ವೀಡಿಯೊ ಚಿತ್ರೀಕರಿಸಿಕೊಂಡ ಆರೋಪ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿ ಸಂಬಂಧ ವಿಶೇಷ ತನಿಖಾ ತಂಡಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಜ್ವಲ್‌ ಪರ ವಕೀಲರು, ಈ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ, ಡೀಫಾಲ್ಟ್‌ ಜಾಮೀನು ಕೋರಿದ್ದೇವೆ ಎಂದು ನ್ಯಾಯಾಲಯಕ್ಕೆ ವಿವರಿಸಿದರು. ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌.ಜಗದೀಶ್‌ ಎಸ್‌ಐಟಿ ಪರ ನೋಟಿಸ್‌ ಪಡೆಯುವುದಾಗಿ ತಿಳಿಸಿದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ನೋಟಿಸ್‌ ಜಾರಿಗೊಳಿಸಿ ಜು.3ರ ಒಳಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿ ವಿಚಾರಣೆ ಮುಂದೂಡಿದೆ.

2019ರಲ್ಲಿ ಸಂಸದರ ಕೋಟಾದಲ್ಲಿ ಮಗನಿಗೆ  ಕೇಂದ್ರೀಯ ವಿದ್ಯಾಲಯದಲ್ಲಿ ಸೀಟು ಕೊಡಿಸುವಂತೆ ಮಹಿಳೆ ಸಂಸದರಾಗಿದ್ದ ಪ್ರಜ್ವಲ್‌ ಅವರನ್ನು ಸಂಪರ್ಕಿಸಿದ್ದರು. ಆಗ ಮಹಿಳೆಯ ಮೊಬೈಲ್‌ ನಂಬರ್‌ ಪಡೆದಿದ್ದ ಪ್ರಜ್ವಲ್‌, ಕರೆ ಮಾಡಿ ವಿವಸ್ತ್ರವಾಗಿ ಮೊಬೈಲ್‌ ಕ್ಯಾಮೆರಾದ ಮುಂದೆ ಬರುವಂತೆ ಪೀಡಿಸುತ್ತಿದ್ದರು ಎಂಬ ಆರೋಪವಿದೆ.

ವಿವಸ್ತ್ರವಾಗಿ ಕ್ಯಾಮೆರಾ ಮುಂದೆ ಬಂದಾಗ ವೀಡಿಯೊ ರೆಕಾರ್ಡ್‌ ಮಾಡಿಕೊಂಡು, ಫೋಟೊಗಳನ್ನು ಸಂಗ್ರಹಿಸಿದ್ದ ಆರೋಪಿ, ತಾನು ಕರೆ ಮಾಡಿದಾಗ ಫೋನ್‌ ತೆಗೆಯದಿದ್ದರೆ ಅವುಗಳನ್ನು ಬಹಿರಂಗಗೊಳಿಸುವುದಾಗಿ ಬೆದರಿಸಿದ್ದರು ಎಂದು ಆರೋಪಿಸಲಾಗಿದೆ.

ಪ್ರಜ್ವಲ್‌ ವಿರುದ್ಧ ಮೂರು ಅತ್ಯಾಚಾರ ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದ್ದು, ಒಂದು ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಯಾಗಿದೆ.

ಅತ್ಯಾಚಾರ ಪ್ರಕರಣ ಬಹಿರಂಗಗೊಳ್ಳುತ್ತಿದ್ದಂತೆಯೇ 2024ರ ಜೂನ್ 24ರಂದು ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ಪಾಸ್‌ಪೋರ್ಟ್ ರದ್ದುಪಡಿಸಿ ಮೇ 31ರಂದು ಸ್ವದೇಶಕ್ಕೆ ಕರೆಸಿ ಬಂಧಿಸಿ ವಿಚಾರಣೆ ನಡೆಸಲಾಯಿತು. ವಿಚಾರಣೆ ಸಂದರ್ಭದಲ್ಲಿ 26 ಸಾಕ್ಷಿಗಳು, 9 ವಸ್ತು ರೂಪದ ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. 180 ದಾಖಲೆ ಸಾಕ್ಷಿಗಳನ್ನು ಗುರುತಿಸಲಾಗಿದೆ.

ದೂರುದಾರ ಮಹಿಳೆಯ ಹೇಳಿಕೆಯನ್ನು ದೃಢೀಕರಿಸಲು ಜೈವಿಕ, ತಾಂತ್ರಿಕ, ಡಿಜಿಟಲ್, ಮೊಬೈಲ್ ಮತ್ತು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲಾಗಿದೆ, 5 ಸಂಪುಟಗಳ 1809 ಪುಟಗಳ ಆರೋಪಪಟ್ಟಿಯಲ್ಲಿ 121 ಸಾಕ್ಷಿಗಳು, 10ಕ್ಕೂ ಹೆಚ್ಚು ದಾಖಲೆ ಸಾಕ್ಷಿಗಳು ಮತ್ತು ತಜ್ಞರ ವರದಿಯನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ವಿಶೇಷ ತನಿಖಾ ತಂಡದ ತನಿಖಾಧಿಖಾರಿಗಳು ಆಗ ಮಾಹಿತಿ ನೀಡಿದ್ದರು.

Related Posts

Leave a Reply

Your email address will not be published. Required fields are marked *