Menu

ಬೆಂಗಳೂರಿನಲ್ಲಿ ಶವ ಸಂಸ್ಕಾರ ಶುಲ್ಕ 250 ರೂ. ನಿಗದಿ ಸೇರಿ ಮಾರ್ಗಸೂಚಿ ಪ್ರಕಟ

ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಐದು ವಿದ್ಯುತ್‌ ಚಿತಾಗಾರಗಳಲ್ಲಿ ಶವಸಂಸ್ಕಾರ ನಡೆಸುವ ಸಂಬಂಧ ಪಾಲಿಕೆ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಶವಸಂಸ್ಕಾರ ನಡೆಸುವವರು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕೃತ ಜಾಲತಾಣ www.bbmp.gov.in ನಲ್ಲಿ ಮಾತ್ರ ನೋಂದಾಯಿಸಿಕೊಳ್ಳಬೇಕು, ಪ್ರತಿ ಶವಸಂಸ್ಕಾರಕ್ಕೆ 250 ರೂ..ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಪಾವತಿಸಿ ರಸೀದಿ ಪಡೆಯಬೇಕು. ಚಟ್ಟ, ಮಡಿಕೆ, ಪೂಜಾ ಸಾಮಗ್ರಿ ವ್ಯವಸ್ಥೆಯನ್ನು ಮೃತರ ಕುಟುಂಬದವರು ಮಾಡಿಕೊಳ್ಳಬೇಕು ಎಂಬುದು ಮಾರ್ಗಸೂಚಿಯಲ್ಲಿದೆ.

ಶವಸಂಸ್ಕಾರಕ್ಕೆ ಬರುವಾಗ ಮನವಿ ಪತ್ರ, ಮರಣದ ವರದಿ ನಮೂನೆ-02, ವೈದ್ಯರ ದೃಢೀಕರಣ ಪತ್ರ ನಮೂನೆ-4A,, ಶವಸಂಸ್ಕಾರ ದೃಢೀಕರಣ ಪತ್ರ/ ಮೃತರ ಪಡಿತರ ಚೀಟಿ/ ಮೃತರ ಆಧಾರ್ ಗುರುತಿನ ಚೀಟಿ/ಮೃತರ ಚುನಾವಣಾ ಗುರುತಿನ ಚೀಟಿ/ ಟಿ.ಸಿ ಮತ್ತು ಪಾನ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು ತರಬೇಕು. ಈ ಗುರುತಿನ ಚೀಟಿ ಇಲ್ಲದಿದ್ದಲ್ಲಿ ನೋಟರಿ ಪ್ರಮಾಣಪತ್ರ ನೀಡಬೇಕು ಎಂದು ಸೂಚಿಸಲಾಗಿದೆ.

ಗಾಯತ್ರಿನಗರದ ಹರಿಶ್ಚಂದ್ರಘಾಟ್, ಪೀಣ್ಯ ವಿದ್ಯುತ್ ಚಿತಾಗಾರ, ಎಸ್‌ಆರ್‌ಎಸ್ ಸ್ಟಾಪ್‌, ಲಗ್ಗೆರೆ, ಮಾಗಡಿ ರಿಂಗ್ ರೋಡ್, ಸುಮನಹಳ್ಳಿ ವಿದ್ಯುತ್ ಚಿತಾಗಾರ, ಕೆಂಗೇರಿ ಉಪನಗರ, ಕೋಮಘಟ್ಟ ಮುಖ್ಯ ರಸ್ತೆ, ಬಂಡೆಮಠ ಕೆಂಗೇರಿ ವಿದ್ಯುತ್ ಚಿತಾಗಾರ, ಬನಶಂಕರಿ ವಿದ್ಯುತ್ ಚಿತಾಗಾರಗಳಲ್ಲಿ ಈ ನಿಯಮ ಜಾರಿಯಲ್ಲಿರುತ್ತದೆ. ಹೆಚ್ಚಿನ ಮಾಹಿತಿಗೆ ಇಇ (ವಿದ್ಯುತ್) ನಾಗೇಶ್‌ ಮೊಬೈಲ್ ಸಂಖ್ಯೆ 9480688528 ಸಂಪರ್ಕಿಸಬಹುದಾಗಿದೆ.

ಮಣ್ಣಿನಲ್ಲಿ ಹೂಳುವುದು, ಕಟ್ಟಿಗೆಯಿಂದ ಸುಡಲಾಗುವ ಶವಸಂಸ್ಕಾರ ಪದ್ಧತಿಯಲ್ಲಿ ಯಾವುದೇ ದೂರುಗಳು ಬಂದಿಲ್ಲ. ವಿದ್ಯುತ್ ಚಿತಾಗಾರದಲ್ಲಿ ಚಟ್ಟ, ಮಡಿಕೆ, ಪೂಜಾ ಸಾಮಗ್ರಿಗಳಿಗೆ ಹಾಗೂ ಪಾಲಿಕೆಗೆ ಎಂದು ಹೇಳಿ ಕೆಲವು ವ್ಯಕ್ತಿಗಳು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಎಲ್ಲಾ ವಿದ್ಯುತ್ ಚಿತಾಗಾರದ ಎಂಜಿನಿಯರ್‌ಗಳನ್ನು ಒಳಗೊಂಡು ಸಭೆ ನಡೆಸಿ ಕೆಲವು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಪಶ್ಚಿಮ ಪಾಲಿಕೆ ಆಯುಕ್ತ ಡಾ.ರಾಜೇಂದ್ರ ಮಾಹಿತಿ ನೀಡಿದ್ದಾರೆ.

ಖಾಸಗಿ ವ್ಯಕ್ತಿಗಳು ವೆಬ್ ಸೈಟ್‌ನಲ್ಲಿ ಬುಕ್ ಮಾಡಿ ಅತಿ ಹೆಚ್ಚಿನ ಮೊತ್ತ ಕುಟುಂಬದವರಿಂದ ಪಡೆಯುತ್ತಿದ್ದರು. ಪಾಲಿಕೆಯಿಂದ 250 ರೂ. ಶುಲ್ಕ ಮಾತ್ರ ಇರುತ್ತದೆ, ಅಧಿಕೃತ ವೆಬ್ ಸೈಟ್‌ನಲ್ಲಿ ಬುಕ್ ಮಾಡಬೇಕು ಎಂಬುದು ನಿಯಮ.

ವೇಳೆ ಹೂಳುವುದು, ಕಟ್ಟಿಗೆಯಿಂದ ಸುಡುವ ಶವಸಂಸ್ಕಾರ ಪದ್ಧತಿಯಲ್ಲಿ ಸಮಸ್ಯೆಗಳೇನಾದರೂ ಇದ್ದಲ್ಲಿ ಸಾರ್ವಜನಿಕರು ಆಯುಕ್ತರು, ಪಶ್ಚಿಮ ನಗರಪಾಲಿಕೆ ವಿಭಾಗ, 18ನೇ ಕ್ರಾಸ್ ರಸ್ತೆ, ಐಡಿಯಲ್ ಹೋಮ್ಸ್ ಟೌನ್ ಶಿಪ್, ರಾಜ ರಾಜೇಶ್ವರಿ ನಗರ, ಬೆಂಗಳೂರು-560098 ಇಲ್ಲಿಗೆ ದೂರು ಸಲ್ಲಿಸಬಹುದು.

ಉತ್ತರ ಪಾಲಿಕೆ ವಿಭಾಗದಲ್ಲಿ ಇರುವ ವಿದ್ಯುತ್ ಚಿತಾಗಾರಗಳಲ್ಲಿ ಸ್ಲಾಟ್ ಗಳನ್ನು ಕಾಯ್ದಿರಿಸುವ ಸಂದರ್ಭ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗಳನ್ನು ಸಂಪರ್ಕಿಸಲು ಪಾಲಿಕೆ ತಿಳಿಸಿದೆ.

Related Posts

Leave a Reply

Your email address will not be published. Required fields are marked *