ಹೂಳು ಹೊರತೆಗೆಯದೆ ರಾಜ್ಯದ ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಿಸಲಾಗದು. ನೀರು ಕಡಿಮೆಯಿರುವಾಗ ನ್ಯಾಯಮಂಡಳಿ ಅಥವಾ ಕಾವೇರಿ ಪ್ರಾಧಿಕಾರದ ಸೂಚನೆಗಳ ಕಡ್ಡಾಯ ಪಾಲನೆ ಹೇಗೆ? ಎರಡೂ ರಾಜ್ಯಗಳ ನಡುವಣ ಜಲಬಿಕ್ಕಟ್ಟು ಒಟ್ಟಾರೆ ದಿಕ್ಕು ತಪ್ಪಿದೆ. ಮಳೆರಾಯನ ಜೂಜಾಟದಿಂದ ಕಣಿವೆಯಲ್ಲಿ ದಿನೇ ದಿನೇ ನೀರು ಸಂಗ್ರಹ ಕಡಿಮೆಯಾಯಿತೇ ವಿನಹ ಹೆಚ್ಚಾಗಿಲ್ಲ. ಆದರೆ ಇಂತಹ ಸನ್ನಿವೇಶದಲ್ಲಿ ಸಂಕಷ್ಟವನ್ನು ಕರ್ನಾಟಕದ ಜೊತೆ ಹಂಚಿಕೊಳ್ಳಲು ತಮಿಳುನಾಡು ಎಂದೂ ಆಸಕ್ತಿ ತೋರಿಲ್ಲ .
ರಾಜ್ಯದಲ್ಲಿ ಭೀಕರ ಬರ. ಬತ್ತಿದ ಕೆರೆ, ಕುಂಟೆ ಮತ್ತು ಜಲಾಶಯಗಳು. ಕಾವೇರಿ ಕಣಿವೆಯಲ್ಲಿ ನೀರಿಗೆ ತತ್ವಾರ. ಮೇಕೆದಾಟು ಯೋಜನೆಗೆ ತಮಿಳುನಾಡು, ಕೇರಳ ಅನುಮತಿ ಬೇಕಿಲ್ಲ ಎಂದು ಕೇಂದ್ರ ಜಲಶಕ್ತಿ ಫರ್ಮಾನು ನೀಡಿದರೂ, ಇದರ ಬೆನ್ನಹಿಂದೆಯೇ ರಾಜ್ಯಕ್ಕೆ ಕೇಂದ್ರದಿಂದ ಅಘಾತ.
ಕಾವೇರಿ ಕಣಿವೆಯಲ್ಲಿ ಕರ್ನಾಟಕವು ನದಿಪಾತ್ರದ ಮೇಲಿನ ಭಾಗದ ರಾಜ್ಯವಾಗಿರುವುದೇ ಸಮಸ್ತ ರಾಜ್ಯದ ಪಾಲಿಗೆ ಒಂದು ನೈಸರ್ಗಿಕ ಶಾಪ ! ಕರ್ನಾಟಕದ ಜಲಾಶಯಗಳು ತಮಿಳುನಾಡಿನ ಜಲಾಶಯಗಳಿಗೂ ಜಲಮೂಲ. ಆದರೆ ಕರ್ನಾಟಕದ ಕೆರೆ, ಕುಂಟೆಗಳಲ್ಲಿ ಹತ್ತಾರು ವರ್ಷಗಳಿಂದ ತುಂಬಿರುವ ಹೂಳು ತೆಗೆಯಲು ತಮಿಳುನಾಡು ತಗಾದೆ ಎತ್ತಿರುವುದೇಕೆ? ಕೆ ಆರ್ ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ತುಂಬಿರುವ ಹೂಳು ಹೊರತೆಗೆದರೆ ಇದರಿಂದ ನೀರಿನ ಸಂಗ್ರಹ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ಕಣಿವೆಯಲ್ಲಿ ಮಳೆಯ ಪ್ರಮಾಣವೇ ಕಡಿಮೆಯಾಗಿರುವಾಗ ಹೂಳು ತೆಗೆಯುವುದರಿಂದ ಎರಡೂ ರಾಜ್ಯಗಳ ಹಿತಾಸಕ್ತಿ ರಕ್ಷಣೆ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ.
ಆದರೆ ಈ ವಿಚಾರದಲ್ಲಿ ತಮಿಳುನಾಡುವಿಗೆ ಕರ್ನಾಟಕದ ಮೇಲೆ ಅನಗತ್ಯ ಗುಮಾನಿ. ಇಲ್ಲಿನ ಕೆರೆ, ಕುಂಟಗಳಲ್ಲಿ ಮತ್ತು ಜಲಾಶಯಗಳಲ್ಲಿ ಹೂಳು ತೆಗೆದು ಜಲಸಂಗ್ರಹದ ಸಾಮರ್ಥ್ಯ ಹೆಚ್ಚಾದರೆ ಇದರಿಂದ ತಮಿಳುನಾಡು ಆತಂಕಕ್ಕೇ ಈಡಾಗುವ ಪ್ರಮೇಯವಿಲ್ಲ. ಕರ್ನಾಟಕವಿಂದು ಅಧಿಕಾರಯುತವಾಗಿ ಹೂಳು ತೆಗೆಯಲು ಮುಂದಾಗುವ ಅಗತ್ಯವಿದೆ. ಕಾವೇರಿ ನದಿ ನೀರು ನಿರ್ವಹಣೆಗೆ ಕೇಂದ್ರವೇನೋ ನ್ಯಾಯಮಂಡಳಿ ರಚಿಸಿದೆ. ಆದರೆ ಇದೇ ವ್ಯಾಪ್ತಿಗೆ ಕೆರೆ, ಕುಂಟೆಗಳನ್ನೂ ಸೇರ್ಪಡಿಸಿ ಹೂಳು ತೆಗೆಯುವ ರಾಜ್ಯದ ಮನವಿಗೆ ಸಕಾರಾತ್ಕಕವಾಗಿ ಸ್ಪಂದಿಸುವ ಅನಿವಾರ್ಯತೆ ಇಪ್ಪತ್ತು ವರ್ಷಗಳ ಹಿಂದೆ ಎಸ್ ಎಂ ಕೃಷ್ಣ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಎಲ್ಲ ಕೆರೆ, ಕುಂಟೆಗಳಲ್ಲಿ ತುಂಬಿರುವ ಹೂಳು ತೆಗೆಯುವ ಯೋಜನೆಗೆ ಸಕಾರಾತ್ಮಕ ಪ್ರಯತ್ನ ನಡೆದಿತ್ತು. ಆದರೆ ಈ ಯೋಜನೆಗೆ ಅಡ್ಡಿ ಮಾಡಿದ್ದೇ ತಮಿಳುನಾಡಿನ ಅಂದಿನ ಮುಖ್ಯ ಮಂತ್ರಿ ಜಯಲಲಿತಾ.
ಕರ್ನಾಟಕದ ಜಲಾಶಯಗಳಲ್ಲಿ ತುಂಬಿರುವ ಹೂಳು ತೆಗೆದರೆ ಇದರಿಂದ ನಮಗಾಗುವ ಲಾಭಕ್ಕಿಂತಲೂ ನಷ್ಟವೇ ಅಧಿಕ ಎಂಬ ಪೂರ್ವಾಗ್ರಹ ಪೀಡಿತ ಮನೋಭಾವನೆಯಿಂದ ಇಂದು, ಎರಡೂ ರಾಜ್ಯಗಳ ನಡುವಣ ಜಲಬಿಕ್ಕಟ್ಟು ಒಟ್ಟಾರೆ ದಿಕ್ಕು ತಪ್ಪಿದೆ. ಹೂಳು ಹೊರತೆಗೆಯದೆ ರಾಜ್ಯದ ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಲು ಸಾಧ್ಯವಿಲ್ಲ. ಮಳೆರಾಯನ ಜೂಜಾಟದ ಇಂದಿನ ದಿನಗಳಲ್ಲಿ ನೀರು ಸಂಗ್ರಹದ ಸಾಮರ್ಥ್ಯ ಹೆಚ್ಚಾಗದೆ ತಮಿಳುನಾಡುವಿಗೆ ನ್ಯಾಯಮಂಡಳಿ ಮತ್ತು ಕಾವೇರಿ ಪ್ರಾಧಿಕಾರ ನಿಗದಿಪಡಿಸುವ ಪ್ರಮಾಣದಲ್ಲಿ ನೀರು ಬಿಡುವುದೂ ಅಸಾಧ್ಯ . ಈ ಸಾಮಾನ್ಯ ವಿವೇಚನೆ ಮತ್ತು ಸಹಜ ನ್ಯಾಯ ಪರಿಕಲ್ಪನೆ ಈ ಕ್ಷಣದವರೆಗೂ ತಮಿಳುನಾಡು ಮಿದುಳಿಗೆ ಹೊಳೆಯದಿರುವುದು ದುರದೃಷ್ಟಕರ. ಇಲ್ಲಿಯವರೆಗೆ ಈ ಸಮಸ್ಯೆಯ ಮೂಲಬೇರು ಕತ್ತರಿಸಿ ಕಾಯಂ ಪರಿಹಾರ ಕಂಡುಕೊಳ್ಳಲು ಎರಡೂ ರಾಜ್ಯಗಳಿಗೆ ಸಾಧ್ಯವಾಗಿಲ್ಲ. ಕಣಿವೆಯ ವಾಸ್ತವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದಲ್ಲಿ ಸಮಸ್ಯೆಗೆ ಪರಿಹಾರ ಎಂಬುದೇ ಮರೀಚಿಕೆ ಆದೀತು.


