ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ತೀವ್ರಗೊಳಿಸಿದ್ದು, ಎಡಿಜಿಪಿ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿರುವ ಆರೋಪವೂ ಕೇಳಿಬಂದಿದೆ. ಜಾರಕಿಹೊಳಿ ನಿವಾಸದಲ್ಲಿ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದ್ದು, ಆ ದಾಖಲೆಗಳನ್ನು ಪರಿಶೀಲಿಸಲು ಇಡಿ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಪಿಡಬ್ಲ್ಯುಡಿ ಇಲಾಖೆಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವ ಆರೋಪಗಳ ತನಿಖೆ ಜೊತೆ ಎಡಿಜಿಪಿ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿರುವ ಆರೋಪ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂಬ ವಿಚಾರ ಕೇಳಿ ಬಂದಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ನೇರವಾಗಿ ತನಿಖೆ ನಡೆಸುವ ಅಧಿಕಾರ ಇಡಿಗೆ ಇಲ್ಲವಾದ್ದರಿಂದ ಪ್ರಕರಣದ ಕುರಿತು ಲೋಕಾಯುಕ್ತಕ್ಕೆ ಪತ್ರ ಬರೆಯಲು ಮುಂದಾಗಿದೆ ಎನ್ನಲಾಗಿದೆ. ರಾಜ್ಯಕ್ಕೆ ಸಂಬಂಧಿಸಿದ ಹಲವು ಪ್ರಮುಖ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲಿಸಲು ಇಡಿ ನಿರ್ದೇಶಕ ರಾಹುಲ್ ನವೀನ್ ಬೆಂಗಳೂರಿಗೆ ಆಗಮಿಸಲಿದ್ದಾರೆ. ರಾಹುಲ್ ನವೀನ್ ಸೇರಿದಂತೆ ವಿಶೇಷ ನಿರ್ದೇಶಕರು ಆಗಮಿಸುವ ಸಾಧ್ಯತೆ ಇದ್ದು, ಎರಡು ದಿನ ತನಿಖೆಯ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಕೆಪಿಎಸ್‌ಸಿ ನೇಮಕ ಪ್ರಕರಣ, ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಪ್ರಕರಣ, ಮುಡಾ ಹಾಗೂ ವಾಲ್ಮೀಕಿ ಪ್ರಕರಣ ಸೇರಿದಂತೆ ಹಲವು ಹಗರಣಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ತನಿಖೆಯ ಮುಂದಿನ ಹಂತಗಳ ಬಗ್ಗೆ ರಾಹುಲ್ ನವೀನ್ ಪರಿಶೀಲನೆ ನಡೆಸಲಿದ್ದಾರೆ.


