Menu

ಚಿಲ್ಲರೆ ನೆಪದಲ್ಲಿ ಬಸ್‌ನಿಂದ ಪ್ರಯಾಣಿಕರ ಇಳಿಸುವಂತಿಲ್ಲ: ಬೈರತಿ ಸುರೇಶ್

byrati suresh

ಚಿಲ್ಲರೆ ವಿಚಾರದಲ್ಲಿ ಪ್ರಯಾಣಿಕರನ್ನು ಶೋಷಣೆ ಮಾಡಬಾರದು, ಚಿಲ್ಲರೆ ನೆಪವೊಡ್ಡಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವುದು ಅಮಾನವೀಯ, ಹೀಗಾಗಿ ಇಳಿಸುವಂತಿಲ್ಲ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಬಿಎಂಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳ ನಿರ್ವಾಹಕರು ಮತ್ತು ಚಾಲಕರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಪ್ರಯಾಣಿಕರನ್ನು ಕೆಳಗಿಳಿಸುವ ನಿರ್ವಾಹಕರ ಧೋರಣೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ.  ಬಿಎಂಟಿಸಿ ಬಸ್ಸಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ನನಗೂ ಇಂತಹ ಅನುಭವ ಆಗಿದೆ. ಚಿಲ್ಲರೆ ನೆಪವೊಡ್ಡಿ ಪ್ರಯಾಣಿಕರನ್ನು ಅರ್ಧ ದಾರಿಯಲ್ಲಿ ಇಳಿಸುವುದು ಅಮಾನವೀಯವಾಗಿರುತ್ತದೆ. ಈ ಕಾರಣ ಮುಂದಿಟ್ಟು ಪ್ರಯಾಣಿಕರನ್ನು ಶೋಷಣೆ ಮಾಡಬಾರದು ಎಂದು ಸೂಚಿಸಿದ್ದಾರೆ.

ಶಕ್ತಿ ಯೋಜನೆಯಡಿ ಪ್ರಯಾಣಿಸುವ ಮಹಿಳೆಯರು ಮತ್ತು ಇತರ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾರ ಮೇಲೆಯೂ ದುರ್ವರ್ತನೆ ತೋರಬಾರದು. ಹಾಗೊಂದು ವೇಳೆ ದೂರುಗಳು ಬಂದರೆ ತಪ್ಪಿತಸ್ಥ ನಿರ್ವಾಹಕರು ಮತ್ತು ಚಾಲಕರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

11-07-2026ರ ರಾತ್ರಿ ಸಾರಿಗೆ ಸಚಿವರು ದಿಢೀರನೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದರು, ಅಂದು ಕೆಂಪೇಗೌಡ ಬಸ್ ನಿಲ್ದಾಣದಿಂದ ನಾಗಶೆಟ್ಟಿಹಳ್ಳಿಗೆ ಸಂಚರಿಸುತ್ತಿದ್ದ ಬಸ್ಸಲ್ಲಿ  ಪ್ರಯಾಣಿಸುವಾಗ ನಿರ್ವಾಹಕ ಟಿ.ಜಿ. ರಾಮಕೃಷ್ಣ ಎಂಬವರು ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಸಚಿವರನ್ನು ಬಸ್ಸಿಂದ  ಕೆಳಗೆ ಇಳಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಸಂಸ್ಥೆಯು ರಾಮಕೃಷ್ಣ ಅವರನ್ನು ಅಮಾನತುಗೊಳಿಸಿತ್ತು.  ರಾಮಕೃಷ್ಣ ಸಚಿವರನ್ನು ಭೇಟಿಯಾಗಿ ತಮ್ಮ ತಪ್ಪಿನ ಬಗ್ಗೆ ವಿಷಾದ ವ್ಯಕ್ತ ಪಡಿಸಿ ಕ್ಷಮೆಯಾಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಚಿವರು, ಇನ್ನೊಮ್ಮೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿ ರಾಮಕೃಷ್ಣ ಅವರ ಅಮಾನತನ್ನು ರದ್ದುಪಡಿಸಿ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *