ಗಿಡಮರಗಳನ್ನು ಕಡಿಯದೆ ಯಾವ ಹೊಸ ಯೋಜನೆಯೂ ಸಾಧ್ಯವಿಲ್ಲ. ಕೇಂದ್ರ ಪರಿಸರ ಇಲಾಖೆ ಈಗ ಹಲವಾರು ರಾಜ್ಯದ ಯೋಜನೆಗಳಿಗೆ ಪರಿಸರದ ನೆಪವೊಡ್ಡಿ ಅನುಮತಿ ನೀಡಿಲ್ಲ. ಹೀಗಾದರೆ ಜನತೆಗಿಂದು ಅನಿವಾರ್ಯವಾದ ವಿದ್ಯುತ್ ಮತ್ತು ರೈಲು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಯಾವ ಸರ್ಕಾರದಿಂದಲೂ ಆಗುವುದಿಲ್ಲ.
ಈ ನಿಟ್ಟಿನಲ್ಲಿ ಕಸ್ತೂರಿರಂಗನ್ ನೀಡಿರುವ ಕೇಂದ್ರದ ವರದಿಯನ್ನು ಸಂಪೂರ್ಣವಾಗಿ ಅಂಗೀಕರಿಸಲು ಜನ ಪ್ರತಿನಿಧಿಗಳ ನೂರಕ್ಕೆ ನೂರರಷ್ಟು ಒಪ್ಪಿಗೆ ನೀಡುವುದು ಅನುಮಾನ.
ಇತ್ತ ಪರಿಸರಕ್ಕೆ ಹಾನಿಯಾಗದೆ ಮತ್ತು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳದೆ ಹಾಗೂ ಅತ್ತ ಯೋಜನೆಗಳಿಗೆ ತೊಂದರೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದು ಸಮತೋಲನ ಶಾಸನಗಳನ್ನು ರಚಿಸುವ ಅಗತ್ಯವಿದೆ.
ನಾಡಿಗೂ,ಕಾಡಿಗೂ ಅವಿನಾಭಾವ . ಪ್ರಕೃತಿ ಮತ್ತು ಮಾನವನ ಸಂಬಂಧ ಬಿಡಿಸಲಾರದ್ದು. ಸಾವಿರಾರು ವರ್ಷಗಳಿಂದಲೂ ಮನುಷ್ಯನು ಈ ಪರಿಸರ ಮತ್ತು ನೈಸರ್ಗಿಕ ಲೋಕದ ಜೊತೆ ನಿಕಟ ಮತ್ತು ನೇರ ಸಂಬಂಧವನ್ನು ಇಟ್ಟುಕೊಂಡೇ ತನ್ನ ಬದುಕನ್ನು ಸಾಗಿಸಿದ್ದಾನೆ.
ಅರಣ್ಯ ಸಂರಕ್ಷಣೆಗೆಂದು ದೇಶದಲ್ಲಿ ಹಲವು ಹತ್ತು ಕಾನೂನುಗಳಿವೆ. ಆದರೆ ಈ ಕಾನೂನುಗಳೆಲ್ಲವೂ ರಚನೆಯಾಗಿರುವುದು ನಮ್ಮ ಸುತ್ತಲಿನ ಗುಡ್ಡ ಕಾಡು, ಕೆರೆ ಮತ್ತು ಕೆರೆ- ಕುಂಟೆಗಳ ಸಂರಕ್ಷಣೆಗೆಂದು. ಸಮಾಜದಲ್ಲಿ ಮನುಷ್ಯನ ಆಸೆ ಮತ್ತು ಬಯಕೆಗಳು ಹೆಚ್ಚಾದಂತೆ ದಿನೇ ದಿನೇ ಕಾಡಿನ ಪ್ರಮಾಣವೂ ಕುಗ್ಗುತ್ತಿದೆ. ಅವುಗಳ ಪೋಷಣೆ ಮತ್ತು ಸಂರಕ್ಷಣೆ ಚುನಾಯಿತ ಸರ್ಕಾರಗಳ ಮೇಲೆ ನಿಂತಿದೆ. ಕಾಡು ಎಂದರೆ ಬರೀ ಗಿಡಮರ ಒಂದೇ ಅಲ್ಲ. ಇಲ್ಲಿನ ಸಂಪನ್ಮೂಲ ಭರಿತ ಔಷಧೀಯ ಹೂವು, ಸಸ್ಯ, ನದಿ, ಪ್ರಾಣಿ ಪಕ್ಷಿಗಳ ಕಾಪಾಡುವಿಕೆ ಕೂಡಾ ಸೇರಿದೆ. ಅಲ್ಲದೆ ಕಾಡಿನಲ್ಲಿ ನೂರಾರು ವರ್ಷಗಳಿಂದ ತಮ್ಮ ಬದುಕು ಮತ್ತು ನೆಲೆಯನ್ನು ಕಂಡುಕೊಂಡಿರುವ ಬುಡಕಟ್ಟು ಜನಾಂಗವನ್ನು ಕಾಪಾಡುವ ಹೊಣೆಗಾರಿಕೆ ಕೂಡಾ ಸರ್ಕಾರದ್ದು. ಇದರ ನಡುವೆ ಕಾಡಿನ ಸಂಪತ್ತನ್ನು ಸರ್ವ ರೀತಿಯಲ್ಲಿ ದೋಚುವ ವಂಚಕರು ಮತ್ತು ಮೋಸಗಾರರು ಕೂಡಾ ಅರಣ್ಯ ಸಂರಕ್ಷಣೆಯ ಕಾರ್ಯಕ್ಕೆ ಕಂಟಕರಾಗಿರುವುದು ದಿಟ.
ಪಶ್ಚಿಮ ಘಟ್ಟಗಳ ಸಂರಕ್ಷಣೆ ವಿಚಾರದ ಗಂಭೀರ ಚರ್ಚೆ ಇಂದು ನಿನ್ನೆಯದಲ್ಲ. ದಶಕಗಳಿಂದಲೂ ಮುಂದುವರಿದಿದೆ. ಉಡುಪಿ, ಮಂಗಳೂರು, ಕೊಡಗು, ಉತ್ತರ ಕನ್ನಡ ಚಿಕ್ಕಮಗಳೂರು, ಶಿವಮೊಗ್ಗ ಅಲ್ಲದೆ ಹಾಸನ ಜಿಲ್ಲೆಗಳು ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಬರುವಂತಹದು. ಈ ಭಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳಿಂದು ಜಾರಿಗೆ ಬರಬೇಕಿದೆ. ಆದರೆ ಈ ಯೋಜನೆಗಳ ಜಾರಿಗೆ ಅರಣ್ಯ ಇಲಾಖೆಯ ಕಠಿಣ ನಿಯಮಗಳು ಮತ್ತು ಕಸ್ತೂರಿರಂಗನ್ ವರದಿಯಲ್ಲಿ ಉಲ್ಲೇಖವಾಗಿರುವ ಶಿಫಾರಸುಗಳು ಬಾಧಕವಾಗಿವೆ.
ಪರಿಸರವಾದಿಗಳು ಕಸ್ತೂರಿರಂಗನ್ ವರದಿ ಪರವಾಗಿದ್ದರೆ, ಮಲೆನಾಡು ಮತ್ತು ಕರಾವಳಿ ಪ್ರದೇಶದ ಜನಪ್ರತಿನಿಧಿಗಳು. ಕಠಿಣ ನಿಯಮಾವಳಿಗಳನ್ನು ಸಡಿಲಿಸುವ ಶಾಸನ ರಚನೆಗಳತ್ತ ಒಲುವು ತೋರಿರುವುದು ಗಮನಾರ್ಹ. ಗಿಡಮರಗಳನ್ನು ಕಡಿಯದೆ ಯಾವ ಹೊಸ ಯೋಜನೆಯೂ ಸಾಧ್ಯವಿಲ್ಲ. ಅಲ್ಲದೆ ಕೇಂದ್ರ ಪರಿಸರ ಇಲಾಖೆ ಕೂಡಾ ಹಲವಾರು ರಾಜ್ಯದ ಯೋಜನೆಗಳಿಗೆ ಅನುಮತಿ ನೀಡಿಲ್ಲ. ಇದು ಹೀಗೆಯೇ ಮುಂದುವರಿದರೆ, ಜನತೆಗಿಂದು ಅನಿವಾರ್ಯವಾದ ವಿದ್ಯುತ್ ಮತ್ತು ರೈಲು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಯಾವ ಸರ್ಕಾರದಿಂದಲೂ ಆಗುವುದಿಲ್ಲ. ಈ ನಿಟ್ಟಿನಲ್ಲಿ ಕಸ್ತೂರಿರಂಗನ್ ನೀಡಿರುವ ಕೇಂದ್ರದ ವರದಿಯನ್ನು ಸಂಪೂರ್ಣವಾಗಿ ಅಂಗೀಕರಿಸಲು ಜನ ಪ್ರತಿನಿಧಿಗಳ ನೂರಕ್ಕೆ ನೂರರಷ್ಟು ಒಪ್ಪಿಗೆ ಸಿಗುವುದು ಅನುಮಾನ.
ಇತ್ತ ಪರಿಸರಕ್ಕೆ ಹಾನಿಯಾಗದೆ ಮತ್ತು ಕಸ್ತೂರಿರಂಗನ್ ವರದಿಯನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳದೆ ಹಾಗೂ ಅತ್ತ ಯೋಜನೆಗಳಿಗೆ ತೊಂದರೆಯಾಗದ ಹಾಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸೂಕ್ತ ಕಾನೂನುಗಳು ರಚನೆಯಾಗಬೇಕಿದೆ. ಮತ್ತು ಈ ಭಾಗದ ಎಲ್ಲ ವರ್ಗದ ಜನತೆಯ ಸಮಸ್ಯೆಗಳನ್ನು ಶಾಸನಸಭೆಯಲ್ಲಿ ಚರ್ಚಿಸುವುದು ಇಂದು ಅನಿವಾರ್ಯವೂ ಅಗಿದೆ.


