Menu

ನೀರಿನ ಕೊರತೆ: ಎಕರೆಗೆ 50 ಸಾವಿರ ರೂ. ಪರಿಹಾರ ನೀಡಲು ಆರ್‌ ಅಶೋಕ ಆಗ್ರಹ

ಮಳೆ ಕೊರತೆಯಿಂದ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕಡಿಮೆಯಾದರೂ ಸಿಎಂ ಡಿಕೆಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದೇ ಕ್ರಮ ವಹಿಸಿಲ್ಲ. ಕೂಡಲೇ ಸರ್ಕಾರ ಎಕರೆಗೆ 50,000 ರೂ. ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದರು.

ಕೆಆರ್‌ಎಸ್‌ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿವಕುಮಾರ್‌ ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗುವ ವೇಳೆಗೆ ರಾಜ್ಯದ ಎಲ್ಲ ಜಲಾಶಯಯಗಳು ಖಾಲಿಯಾಗಿವೆ. ಕೆಆರ್‌ಎಸ್‌ನಲ್ಲಿ 6 ಟಿಎಂಸಿ ನೀರು ಇದೆ. ಒಳಹರಿವು 900 ಕ್ಯೂಸೆಕ್ಸ್‌ ಇದೆ. ಆದರೆ ಹೊರಗೆ ಹೆಚ್ಚು ನೀರು ಬಿಡಲಾಗುತ್ತಿದೆ ಎಂಬ ಅನುಮಾನವಿದೆ. ಪ್ರತಿ ತಿಂಗಳು 3 ಟಿಎಂಸಿ ಅಗತ್ಯವಿದೆ. ಇದನ್ನು ಕುಡಿಯುವ ನೀರಿಗೆ ಬಳಸಬಹುದು. 1 ಲಕ್ಷ ಎಕರೆಗಿಂತಲೂ ಅಧಿಕ ಜಮೀನಿನಲ್ಲಿ ರೈತರು ಬೆಳೆ ಬೆಳೆದಿದ್ದಾರೆ.  ಬೆಳೆ ಬೆಳೆಯಬಾರದು ಎಂದು ಮುಖ್ಯಮಂತ್ರಿ ಕರೆ ನೀಡಿದ್ದಾರೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮಿತವ್ಯಯದ ಕರೆ ನೀಡಿದರೆ ಬಾಯಿ ಬಡಿದುಕೊಂಡು ಕಾಂಗ್ರೆಸ್‌ ಈಗ ರೈತರಿಗೆ ಅದೇ ಕರೆ ನೀಡಿದೆ. ಧೈರ್ಯವಿದ್ದರೆ ತಮಿಳುನಾಡು ರೈತರು ಬೆಳೆ ಬೆಳೆಯಬಾರದು ಎಂದು ಕರೆ ನೀಡಬೇಕಿತ್ತು. ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆ ವಿರುದ್ಧ ನಿರ್ಣಯ ಕೈಗೊಂಡರೂ ಅದರ ವಿರುದ್ಧ ಮಾತಾಡಿಲ್ಲ. ತಮಿಳುನಾಡಲ್ಲಿ ಪಾಲುದಾರ ಪಕ್ಷದ ಒಳಿತಿಗಾಗಿ ನಮ್ಮ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದರು.

ಅಧಿಕಾರಿಗಳ ಪ್ರಕಾರ ಶೇ.5 ರಷ್ಟು ಮಾತ್ರ ಬಿತ್ತನೆ ನಡೆದಿದೆ. ಸಿಎಂ ಡಿಕೆಶಿವಕುಮಾರ್‌ ರೈತ ಮುಖಂಡರ ಸಭೆ ಕರೆದು ಬೆಳೆ ಬಗ್ಗೆ ಚರ್ಚಿಸಬೇಕಿತ್ತು. ಆದರೆ ಕಸ, ಸುರಂಗ ರಸ್ತೆ ಮೊದಲಾದ ಯೋಜನೆಗಳಿಗೆ ಟೆಂಡರ್‌ ಕರೆಯಲು ಗಡಿಬಿಡಿ ಮಾಡುತ್ತಿದ್ದಾರೆ. ಈ ಆಸಕ್ತಿ ರೈತರ ಬಗ್ಗೆ ಇಲ್ಲವಾಗಿದೆ. ಮಳೆ ಕೊರತೆ, ಬಿತ್ತನೆ ಯಾವುದೇ ವಿಷಯದ ಬಗ್ಗೆ ಚರ್ಚಿಸಲು ಒಂದೇ ಒಂದು ಸಭೆ ನಡೆಸಿಲ್ಲ. ಕೃಷಿ ಇಲಾಖೆಗೆ ಸಚಿವರಿಲ್ಲ ಹಾಗೂ ಸಂಪುಟದಲ್ಲಿ ಸಚಿವರೂ ಇಲ್ಲ. ದೆಹಲಿಗೆ ಪೇಮೆಂಟ್‌ ಕೊಡಲು ಕಾಯುತ್ತಿದ್ದಾರಾ ಎಂದು ಪ್ರಶ್ನೆ ಮಾಡಿದರು.

ಬರಗಾಲಕ್ಕೆ ಯಾವುದೇ ಸಿದ್ಧತೆಯನ್ನು ಈ ಸರ್ಕಾರ ಮಾಡಿಲ್ಲ. ರೈತರು ಬದಲಿ ಬೆಳೆ ಬೆಳೆಯಲು ಸಲಹೆ ನೀಡುತ್ತಾರೆಯೇ ಹೊರತು ಸರ್ಕಾರದಿಂದ ಯಾವುದೇ ಕ್ರಮ ವಹಿಸಿಲ್ಲ. ರೈತರಿಗಾಗುವ ನಷ್ಟವನ್ನು ಕೊಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಬೇಕಿತ್ತು. ಬಿಜೆಪಿ ಅವಧಿಯಲ್ಲಿ ದುಪ್ಪಟ್ಟು ಪರಿಹಾರ ನೀಡಬೇಕಿತ್ತು. ಈಗ ಎಕರೆಗೆ 50,000 ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಈ ಭಾಗದ ರೈತರು ಬೆಳೆ ಬೆಳೆಯಲು ನೀರು ಕೊಡಿ ಅಥವಾ ಪರಿಹಾರ ಕೊಡಿ ಎಂದು ಕೇಳುತ್ತಿದ್ದಾರೆ. ಈ ರೈತರ ಜೊತೆ ಮುಖ್ಯಮಂತ್ರಿಗಳು ಚರ್ಚಿಸಿ ಪರಿಹಾರದ ಬಗ್ಗೆ ಚರ್ಚೆ ಮಾಡಬೇಕು. ಇಲ್ಲವಾದರೆ ಪಾಪರ್‌ ಆಗಿದ್ದೇವೆ ಎಂದು ತಿಳಿಸಬೇಕು. ತಮಿಳುನಾಡು ಸರ್ಕಾರ ಕಾವೇರಿ ನೀರಿಗೆ ಬೇಡಿಕೆ ಇಟ್ಟಿದೆ. ಇಂತಹ ಸಮಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡು ನೀರಿನ ಸಮಸ್ಯೆಯನ್ನು ತಿಳಿಸಬೇಕಿತ್ತು ಎಂದರು.

ಜಮೀನು ಸ್ವಾಧೀನ ವಿರೋಧಿಸಿ ರೈತರು ಪ್ರತಿಭಟಿಸಿದರೆ ಲಾಠಿ ಪ್ರಹಾರ ಮಾಡಲಾಗುತ್ತಿದೆ. ಈ ರೀತಿಯ ಆಡಳಿತ ಹೆಚ್ಚು ಕಾಲ ನಡೆಯುವುದಿಲ್ಲ. ಸಚಿವ ಪ್ರಿಯಾಂಕ್‌ ಖರ್ಗೆಯವರಿಗೆ ಗೃಹ ಇಲಾಖೆಯ ಬಗ್ಗೆ ಸ್ವಲ್ಪವೂ ಅರಿವಿಲ್ಲ. ಕೇವಲ ಆರ್‌ಎಸ್‌ಎಸ್‌ ಬಗ್ಗೆ ಮಾತ್ರ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಿಡದಿಯಲ್ಲಿ ಮೂರುವರೆ ಸಾವಿರ ಎಕರೆ ಸರ್ಕಾರಿ ಜಾಗವನ್ನು ಕಬಳಿಸಲು ಸರ್ಕಾರ ಅವಕಾಶ ನೀಡಿದೆ. ಡಿಕೆಶಿವಕುಮಾರ್‌ ಬಿಸಿನೆಸ್‌ಮ್ಯಾನ್‌ ಎಂದು ಹೇಳಿಕೊಂಡಿರುವುದರಿಂದ ಅವರಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.

ಎಸ್‌ಐಆರ್‌ನಲ್ಲಿ ಅಧಿಕಾರಿಗಳು ಮನೆಗೆ ಹೋಗಿ ಅರ್ಜಿ ಭರ್ತಿ ಮಾಡಿಸಬೇಕು. ಬಾಂಗ್ಲಾ, ಪಾಕಿಸ್ತಾನಿ ಜನರ ಅನುಕೂಲಕ್ಕಾಗಿ ಮಸೀದಿಗಳಲ್ಲಿ ಅರ್ಜಿ ಭರ್ತಿ ಮಾಡುವುದು ನಾನು ವಿರೋಧಿಸಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *