ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ವೆ ನಂಬರ್ 411ರಲ್ಲಿರುವ 200 ಎಕರೆ ಸರ್ಕಾರಿ ಜಮೀನನ್ನು ಕಬಳಿಸಿರುವ ಪ್ರಕರಣವೊಂದು ಬಯಲಾಗಿದೆ.
ತಾಲೂಕಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮೊಹಮ್ಮದ್ ಹುಸೇನ್ ಈ ಹಗರಣದಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ನೌಕರನಂತೆ ನಟಿಸಿ ಅನಧಿಕೃತವಾಗಿ ಸರ್ಕಾರಿ ತಂತ್ರಾಂಶದಲ್ಲಿ ದಾಖಲೆಗಳನ್ನು ಡಿಜಿಟಲೀಕರಣ ಮಾಡುತ್ತಿದ್ದ ಖಾಸಗಿ ವ್ಯಕ್ತಿ ನಿತಿನ್ ಪ್ರೇಮಾನಂದ ಸೇರಿದಂತೆ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದಾರೆ.
ಖಾಸಗಿ ವ್ಯಕ್ತಿ ಇಲಾಖೆಯ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಪಡೆದು ಸಿಬ್ಬಂದಿ ಮಾಡಬೇಕಾದ ಕೆಲಸವನ್ನು ಅನಧಿಕೃತವಾಗಿ ಮಾಡುತ್ತಿದ್ದ. ಸಂಬಂಧಪಟ್ಟ ಅಧಿಕಾರಿಗಳಿಗೆ ಲಂಚ ನೀಡಿ ದಾಖಲೆಗಳನ್ನು ತಿದ್ದಿ ಅಕ್ರಮವಾಗಿ ಆರ್‌ಟಿಸಿ ಸೃಷ್ಟಿಸಿ ಕ್ರಯಪತ್ರಗಳನ್ನು ಮಾಡಿಕೊಳ್ಳಲಾಗಿದೆ. ತಹಸೀಲ್ದಾರ್ ಕಚೇರಿ, ಎಡಿಎಲ್ ಆರ್ ಮತ್ತು ಪಿಡಿಒ ಕಚೇರಿಯ ಅಧಿಕಾರಿಗಳು ಈ ಹಗರಣದಲ್ಲಿ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ.
ಸರ್ವೆ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನೇಶಾ ಸಾರಿಕಾ ಮಲ್ಲಿ ಸಿ ಮತ್ತು ನಿತಿನ್ ಪ್ರೇಮಾನಂದ ಬಂಧಿತರು. ಬಂಧಿತ ಆರೋಪಿಗಳು ತಮ್ಮ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಖಾಸಗಿ ವ್ಯಕ್ತಿಗೆ ನೀಡಿದ್ದರು. ಅಧಿಕಾರಿಗಳೇ ಲಾಗಿನ್ ವಿವರಗಳನ್ನು ಹಂಚಿಕೊಂಡಿದ್ದರಿಂದ ಅಕ್ರಮವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಲು ಸಾಧ್ಯವಾಗಿದೆ ಎಂಬ ವಿಚಾರ ತನಿಖೆ ವೇಳೆ ಪತ್ತೆಯಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಹೊರಡಿಸಿದ ವಾರಂಟ್‌ಗಳ ಆಧಾರದ ಮೇಲೆ ಆರೋಪಿಗಳ ಕಚೇರಿ ಹಾಗೂ ಮನೆಗಳಲ್ಲಿ ದಾಳಿ ನಡೆಸಲಾಗಿದೆ. ಆರೋಪಿಗಳ ಮನೆಯಲ್ಲಿ ವಶಪಡಿಸಿಕೊಳ್ಳಲಾದ 1,40,200 ನಗದು ಹಣಕ್ಕೆ ಸಮರ್ಪಕ ಉತ್ತರ ಸಿಗದ ಕಾರಣ ವಶಕ್ಕೆ ಪಡೆಯಲಾಗಿದೆ.
200 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಲು ಅಕ್ರಮ ಖಾತಾ ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಮಹಾದೇವಪುರದ ನಾಗೇಂದ್ರ ಉಪ ಲೋಕಾಯುಕ್ತರಿಗೆ ದೂರು ನೀಡಿದ್ದರು. ಸರ್ವೆ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರ್ ಮತ್ತು ಎಡಿಎಲ್‌ಆರ್ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.
ನ್ಯಾಯಮೂರ್ತಿ ವೀರಪ್ಪ ಅವರು ಮಂಡ್ಯ ಲೋಕಾಯುಕ್ತ ಪೊಲೀಸರಿಗೆ, ತಹಶೀಲ್ದಾರ್ ಚೇತನಾ ಯಾದವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಿ ಆರ್ ನಾಗೇಂದ್ರ, ಎಡಿಎಲ್ ಆರ್ ಮೊಹಮ್ಮದ್ ಹುಸೇನ್ ಮತ್ತು ಪಾಂಡವಪುರ ಉಪ ವಿಭಾಗದ ಸಹಾಯಕ ಆಯುಕ್ತ ಶ್ರೀನಿವಾಸ್ ಅವರ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ನಡೆಸುವಂತೆ ಆದೇಶಿಸಿದ್ದರು. ಶೋಧ ಕಾರ್ಯ ಮತ್ತು ತನಿಖೆ ಮುಂದುವರಿದಿದೆ.


