Menu

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ VLTD, GPS

ಕೆಎಸ್ಸಾರ್ಟಿಸಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆಗಾಗಿ ಬಸ್‌ಗಳಲ್ಲಿಗೆ ಜಿಪಿಎಸ್ ಆಧಾರಿತ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಪ್ಯಾನಿಕ್ ಬಟನ್ ಅಳವಡಿಕೆ ಕ್ರಮ ಕೈಗೊಂಡಿದೆ.

ಈ ವ್ಯವಸ್ಥೆ ಸಂಪೂರ್ಣ ಅನುಷ್ಠಾನಗೊಂಡ ಬಳಿಕ ಬಸ್ ಎಲ್ಲಿದೆ, ಯಾವ ಮಾರ್ಗದಲ್ಲಿ ಸಂಚರಿಸುತ್ತಿದೆ ಹಾಗೂ ತುರ್ತು ಸಂದರ್ಭದಲ್ಲಿ ಬಸ್‌ನ ನಿಖರ ಸ್ಥಳ ಯಾವುದು ಎಂಬುದನ್ನು ಕಮಾಂಡ್ ಸೆಂಟರ್‌ನಿಂದ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿದೆ.

ಈಗಾಗಲೇ 2,344 ಬಸ್‌ಗಳಿಗೆ VLTD ಸಾಧನ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ. ಉಳಿದ ಬಸ್‌ಗಳಿಗೂ ವಿಸ್ತರಿಸುವ ಉದ್ದೇಶದಿಂದ ಟೆಂಡರ್ ಪ್ರಕ್ರಿಯೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. GPS ವ್ಯವಸ್ಥೆ ಬಸ್‌ಗಳಲ್ಲಿ ಅಳವಡಿಸುವುದರಿಂದ ವಾಹನಗಳ ಸಂಚಾರವನ್ನು ನೇರವಾಗಿ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗಲಿದೆ. ಬಸ್ ತನ್ನ ನಿಗದಿತ ಮಾರ್ಗದಲ್ಲಿ ಸಂಚರಿಸುತ್ತಿದೆಯೇ, ಎಲ್ಲಿದೆ ಹಾಗೂ ಅಸಹಜವಾಗಿ ಎಲ್ಲಾದರೂ ನಿಂತಿದೆಯೇ ಎಂಬ ಮಾಹಿತಿಯನ್ನು ನಿಯಂತ್ರಣ ಕೇಂದ್ರದಲ್ಲಿದ್ದುಕೊಂಡು ಪಡೆಯಲು ಸಾಧ್ಯವಾಗಲಿದೆ.

ಪ್ರಯಾಣದ ವೇಳೆ ಮಹಿಳೆ ಅಥವಾ ಯಾವುದೇ ಪ್ರಯಾಣಿಕರಿಗೆ ತುರ್ತು ಪರಿಸ್ಥಿತಿ ಎದುರಾದರೆ ಬಸ್‌ನಲ್ಲಿರುವ ಪ್ಯಾನಿಕ್ ಬಟನ್ ಬಳಸಬಹುದಾಗಿದೆ. ಕಿರುಕುಳ, ಅಪಘಾತ, ಆರೋಗ್ಯ ಸಮಸ್ಯೆ ಅಥವಾ ಇತರ ತುರ್ತು ಸಂದರ್ಭಗಳಲ್ಲಿ ಬಟನ್ ಸಕ್ರಿಯಗೊಂಡ ತಕ್ಷಣಮಾಹಿತಿ ಕೇಂದ್ರ ಕಮಾಂಡ್ ಸೆಂಟರ್‌ಗೆ ರವಾನೆಯಾಗುತ್ತದೆ. ಬಸ್‌ನ ಸ್ಥಳದ ಮಾಹಿತಿಯೂ ನಿಯಂತ್ರಣ ಕೇಂದ್ರಕ್ಕೆ ಲಭ್ಯವಾಗಲಿದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿ ಅಗತ್ಯವಿದ್ದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ತುರ್ತು ನೆರವು ಒದಗಿಸಲು ಕ್ರಮ ಕೈಗೊಳ್ಳಬಹುದು.

ರಾತ್ರಿ ವೇಳೆ ದೂರದೂರುಗಳಿಗೆ ಬಸ್‌ನಲ್ಲಿ ಪ್ರಯಾಣಿಸುವ ಒಂಟಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಈ ವ್ಯವಸ್ಥೆ ಹೆಚ್ಚು ಉಪಯುಕ್ತವಾಗಲಿದೆ. ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಿದ ಬಳಿಕ ಅವುಗಳು 24 ಗಂಟೆಯೂ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ತಪ್ಪು ಅಥವಾ ಅನಗತ್ಯ ಪ್ಯಾನಿಕ್ ಅಲರ್ಟ್‌ಗಳು ಹೆಚ್ಚಾದರೆ ನಿಜವಾದ ತುರ್ತು ಸಂದೇಶವನ್ನು ಗುರುತಿಸುವುದು ಕಷ್ಟವಾಗಬಹುದು. ಸಾಧನಗಳ ನಿರಂತರ ತಾಂತ್ರಿಕ ಪರಿಶೀಲನೆ, ನೆಟ್‌ವರ್ಕ್ ನಿರ್ವಹಣೆ ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿ ಅಗತ್ಯವಿದೆ.

ಪ್ಯಾನಿಕ್ ಬಟನ್ ಒತ್ತಿದ ಬಳಿಕ ಕಮಾಂಡ್ ಸೆಂಟರ್ ಎಚ್ಚೆತ್ತುಕೊಳ್ಳುವುದು, ಬಸ್‌ನ ಸ್ಥಳ ಗುರುತಿಸುವುದು, ಸಮೀಪದ ಪೊಲೀಸ್ ಅಥವಾ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡುವುದು ಹಾಗೂ ಅಗತ್ಯವಿದ್ದರೆ ತಕ್ಷಣ ಸ್ಥಳಕ್ಕೆ ನೆರವು ತಲುಪಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿ ನಡೆಯಬೇಕು.

Related Posts

Leave a Reply

Your email address will not be published. Required fields are marked *