Menu

ಇರಾನ್‌ ಮೇಲೆ ಮುಂದುವರಿದ ಅಮೆರಿಕ ದಾಳಿ: ಕತಾರ್‌ ಸೇರಿ ಕೊಲ್ಲಿ ರಾಷ್ಟ್ರಗಳ ಮೇಲೆ ಇರಾನ್‌ ಕ್ಷಿಪಣಿ

ಅಮೆರಿಕವು ಸತತ ಆರನೇ ದಿನ ಇರಾನ್‌ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್, ಪರ್ಷಿಯನ್ ಕೊಲ್ಲಿಯಲ್ಲಿರುವ ಕತಾರ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ಬೆಳವಣಿಗೆಗಳಿಂದಾಗಿ ಪಶ್ಚಿಮ ಏಷ್ಯಾ ವಲಯದಲ್ಲಿ ಯುದ್ಧದ ಭೀತಿ ತೀವ್ರಗೊಂಡಿದೆ.

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟಿದ್ದ ತಾತ್ಕಾಲಿಕ ಕದನ ವಿರಾಮ ಮುರಿದುಬಿದ್ದ ಬಳಿಕ ಹರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಸಂಘರ್ಷ ಮತ್ತಷ್ಟು ಹೆಚ್ಚಿದೆ. ಇರಾನ್‌ನ ನಾಗರಿಕ ಮತ್ತು ಮಿಲಿಟರಿ ಸಾರಿಗೆ ಮೂಲಸೌಕರ್ಯ ಗುರಿಯಾಗಿಸಿಕೊಂಡು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶದಂತೆ ದಾಳಿ ನಡೆದಿದೆ.

ಇರಾನ್‌ ಕತಾರ್‌ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿಗಳನ್ನು ಹೊಡೆದುರುಳಿಸಿದ ವೇಳೆ ಬಿದ್ದ ಅವಶೇಷಗಳಿಂದ ಒಂದು ಮಗು ಗಾಯಗೊಂಡಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.

ಅಮೆರಿಕದ ದಾಳಿಯಲ್ಲಿ ಇದುವರೆಗೆ ಇರಾನ್‌ನಲ್ಲಿ 35ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಮೆರಿಕ ನಡೆಸಿದ ದಾಳಿಯಲ್ಲಿ ಇರಾನ್‌ನ ದಕ್ಷಿಣ ಭಾಗದ ಹೋರ್ಮೊಜ್ಗಾನ್ ಪ್ರಾಂತ್ಯದ ಬಂದರ್ ಖಮೀರ್ ನಗರದಲ್ಲಿನ ಪ್ರಮುಖ ಸೇತುವೆಗಳು ಹಾನಿಗೊಂಡಿವೆ.

ಇರಾನ್‌ನ ಕಚ್ಚಾ ತೈಲ ರಫ್ತು ತಡೆಯಲು ಅಮೆರಿಕ ಮತ್ತೆ ಇರಾನ್ ಬಂದರುಗಳ ವಿರುದ್ಧ ನೌಕಾ ದಿಗ್ಬಂಧನ ಜಾರಿಗೊಳಿಸಿದೆ. ತಿಂಗಳ ಆರಂಭದಲ್ಲೇ ಹರ್ಮುಜ್ ಜಲಸಂಧಿಯ ಮೂಲಕ ಸಾಗುವ ಸರಕು ಸಾಗಣೆ ಶೇ.25 ಕುಸಿದಿದೆ. ಹಲವು ತೈಲ ಸಾಗಣೆ ಹಡಗುಗಳು ಸ್ಥಳ ಮಾಹಿತಿ ಪ್ರಸಾರ ವ್ಯವಸ್ಥೆ ಸ್ಥಗಿತಗೊಳಿಸಿ ಸಂಚರಿಸುತ್ತಿದ್ದು, ಕೆಲವು ಹಡಗುಗಳು ಸುರಕ್ಷತೆ ದೃಷ್ಟಿಯಿಂದ ಸಮುದ್ರದಲ್ಲೇ ಲಂಗರು ಹಾಕಿವೆ.

ಅಮೆರಿಕ ನೌಕಾಪಡೆಯು ನೌಕಾ ದಿಗ್ಬಂಧನ ಉಲ್ಲಂಘಿಸಲು ಯತ್ನಿಸಿದ್ದ ಮೂರು ವಾಣಿಜ್ಯ ಹಡಗುಗಳ ದಾರಿಯನ್ನು ಬದಲಿಸಿದೆ. ಆದೇಶ ಪಾಲಿಸದ ಒಂದು ಹಡಗನ್ನು ನಿಷ್ಕ್ರಿಯಗೊಳಿಸಿ ಮತ್ತೊಂದು ಹಡಗನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದಿದೆ.

Related Posts

Leave a Reply

Your email address will not be published. Required fields are marked *