Menu

ಆಂಧ್ರದಲ್ಲಿ COVID ಅಲರ್ಟ್‌: ಇಬ್ಬರು ಸೋಂಕಿಗೆ ಬಲಿ, ಎಂಟು ಸಕ್ರಿಯ ಪ್ರಕರಣ ಪತ್ತೆ

ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್ ವಕ್ಕರಿಸಿಕೊಂಡಿದ್ದು, ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಇತ್ತೀಚೆಗೆ ಎಂಟು ಸಕ್ರಿಯ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು
ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದೆ.

ರಾಜಂಪೇಟೆ ಮೂಲದ 52 ವರ್ಷದ ವ್ಯಕ್ತಿಯೊಬ್ಬರಿಗೆ ಜ್ವರ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ವೈದ್ಯಕೀಯ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತು. ಅವರನ್ನು ತಮಿಳುನಾಡಿನ ವೆಲ್ಲೂರಿನ ಸಿಎಂಸಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

43 ವರ್ಷದ ವ್ಯಕ್ತಿಯೊಬ್ಬರು ಆರೋಗ್ಯ ಸಮಸ್ಯೆಯಿಂದ ಕಡಪದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೋವಿಡ್ ಸೋಂಕು ಇರುವುದು ಪತ್ತೆಯಾಗಿಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಅಸು ನೀಗಿದ್ದಾರೆ.
ಕಡಪ ವೈದ್ಯಕೀಯ ಕಾಲೇಜಿನ 25 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಮನೆಯಲ್ಲೇ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯು ವಿಶೇಷ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ನಿಯೋಜಿಸಿ ಸೋಂಕು ಕಂಡುಬಂದ ಪ್ರದೇಶಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. 18 ಮಾದರಿಗಳ ವರದಿ ನೆಗೆಟಿವ್ ಬಂದಿದೆ. ಸೋಂಕಿತರು ಯಾವ ಮೂಲಗಳ ಮೂಲಕ ಸೋಂಕಿಗೆ ಒಳಗಾದರು ಎಂಬುದನ್ನು ಪತ್ತೆಹಚ್ಚಲು ಕಾಂಟ್ಯಾಕ್ಟ್ ಟ್ರೇಸಿಂಗ್ ಪ್ರಕ್ರಿಯೆ ಚುರುಕುಗೊಳಿಸಲಾಗಿದೆ.

ಪತ್ತೆಯಾಗಿರುವ ವೈರಸ್ ಯಾವುದೇ ಹೊಸ ರೂಪಾಂತರವೇ ಎಂಬುದನ್ನು ತಿಳಿಯಲು ಮಾದರಿಗಳನ್ನು ಪುಣೆಯ ಪ್ರಯೋಗಾಲಯಕ್ಕೆ ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಕಳುಹಿಸಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವೆ ಸವಿತಾ, ಸೋಂಕು ಮತ್ತಷ್ಟು ಹರಡದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋವಿಡ್ ಮಾರ್ಗಸೂಚಿಗಳ ಪಾಲನೆ, ಜಾಗೃತಿ ಮೂಡಿಸುವುದು ಮತ್ತು ಸೋಂಕು ಕಂಡುಬಂದ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸುವಂತೆ ನಿರ್ದೇಶನ ನೀಡಿದ್ದಾರೆ. ಆಸ್ಪತ್ರೆಗಳು, ಸಾರ್ವಜನಿಕ ಸ್ಥಳಗಳು ಹಾಗೂ ಜನದಟ್ಟಣೆಯಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದ್ದಾರೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ ಇರುವವರನ್ನು ಪರೀಕ್ಷೆಗೆ ಒಳಪಡಿಸಿ ಅಗತ್ಯವಿದ್ದಲ್ಲಿ ಐಸೋಲೇಷನ್‌ಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

Related Posts

Leave a Reply

Your email address will not be published. Required fields are marked *