ತುಮಕೂರು ಶಿರಾ ತಾಲೂಕಿನ ಹನುಮನಹಳ್ಳಿಯಲ್ಲಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಪತಿಯೂ ಸಾವಿಗೆ ಶರಣಾದ ಘಟನೆ ನಡೆದಿದೆ.
ಶರಣ್ಯ (20), ಗಿರೀಶ್ (28) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದರು. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಶರಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದು, ಇದನ್ನು ನೋಡಿದ ಗಿರೀಶ್ ಹೊಲದ ಹತ್ತಿರದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪಟ್ಟನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಪುರುಷನೊಂದಿಗೆ ಹೋದ ಪತ್ನಿ, ಮಕ್ಕಳ ಕೊಂದು ಪತಿ ಆತ್ಮಹತ್ಯೆ
ಬೇರೆ ಪುರುಷನೊಂದಿಗೆ ಪತ್ನಿ ಪರಾರಿಯಾಗಿದ್ದಕ್ಕೆ ನೊಂದ ವ್ಯಕ್ತಿಯು ಇಬ್ಬರು ಮಕ್ಕಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಟುಟಿಕೋರಿನ್ ಜಿಲ್ಲೆಯ ಪುದುಕೊಟ್ಟೈ ಬಳಿಯ ಸವೇರಿಯಾರ್ಪುರಂನ ಟ್ರಕ್ ಚಾಲಕ ಮೇರಿ ಮೈಕೆಲ್, ಮಗಳು ಮೇರಿ ನಿರೋಷಾ (14) ಮತ್ತು ಮಗ ಮೇರಿ ಕೆನಿಸ್ಟನ್ (12) ಮೃತಪಟ್ಟವರು.
ಮೈಕೆಲ್ ಪತ್ನಿ ಆರು ತಿಂಗಳ ಹಿಂದೆ ಕುಟುಂಬ ತೊರೆದು ಬೇರೆ ವ್ಯಕ್ತಿಯೊಂದಿಗೆ ಹೋಗಿದ್ದಳು ಎನ್ನಲಾಗಿದೆ. ಇದರಿಂದ ಮೈಕೆಲ್ ಖಿನ್ನತೆಗೆ ಒಳಗಾಗಿ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದ. ಶುಕ್ರವಾರ ರಾತ್ರಿ ಮಕ್ಕಳಿಗೆ ಊಟ ಮಾಡಿಸಿ ಮಲಗುವಂತೆ ಹೇಳಿದ್ದಾನೆ. ನಂತರ ಮಕ್ಕಳಿಗೆ ಕರೆಂಟ್ ಶಾಕ್ ಕೊಟ್ಟು ಅದೇ ವಿದ್ಯುತ್ ತಂತಿಯಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಕೆಲ್ ತಂದೆ 75 ವರ್ಷದ ಆಂಥೋನಿ ಮುತ್ತು ಮನೆಯ ಹೊರಗೆ ಮಲಗಿದ್ದರು. ಶನಿವಾರ ಮಧ್ಯಾಹ್ನದವರೆಗೂ ಬಾಗಿಲು ಲಾಕ್ ಆಗಿದ್ದಾಗ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ತಿಳಿಸಿದ ಬಳಿಕ ಬಾಗಿಲು ಒಡೆದು ಒಳಗೆ ಹೋದಾಗಮೃತದೇಹಗಳು ಹಾಸಿಗೆಯ ಮೇಲೆ ಪತ್ತೆಯಾಗಿವೆ.


