Menu

ಗೋಹತ್ಯೆಗೆ ಸಂಪೂರ್ಣ ನಿಷೇಧ: ಹೈಕೋರ್ಟ್‌ ಆದೇಶ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಗೆ

ತಮಿಳುನಾಡಿನಲ್ಲಿ ಗೋಹತ್ಯೆಗೆ ಸಂಪೂರ್ಣ ನಿಷೇಧ ಹೇರಿರುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಅಲ್ಲಿನ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲು ಏರಿದೆ. ಹೈಕೋರ್ಟ್ ಆದೇಶವು ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ವ್ಯಾಪ್ತಿ ಉಲ್ಲಂಘಿಸಿ ನೀಡಲಾಗಿದೆ ಎಂದು ಸರ್ಕಾರ ವಾದಿಸಿದೆ.

ಮೇ 27ರಂದು ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ವಿ. ಲಕ್ಷ್ಮೀನಾರಾಯಣ್ ಅವರ ವಿಭಾಗೀಯ ಪೀಠವು, ಕಾಯ್ದೆಯಡಿ ಅನುಮತಿಸಲಾದ ಸಂದರ್ಭಗಳನ್ನು ಹೊರತುಪಡಿಸಿ ಬಕ್ರೀದ್ ಸೇರಿದಂತೆ ಯಾವುದೇ ದಿನ ಹಸು ಅಥವಾ ಕರುವಿನ ಹತ್ಯೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ–1958ರ ಸೆಕ್ಷನ್ 4ರ ಪ್ರಕಾರ, 10 ವರ್ಷ ಮೇಲ್ಪಟ್ಟ, ಕೆಲಸಕ್ಕೆ ಅಥವಾ ಸಂತಾನೋತ್ಪತ್ತಿಗೆ ಅಯೋಗ್ಯವೆಂದು ಸಂಬಂಧಪಟ್ಟ ಪ್ರಾಧಿಕಾರದಿಂದ ಪ್ರಮಾಣೀಕರಿಸಲಾದ ಹಸುವನ್ನು
ವಧಿಸಲು ಅವಕಾಶವಿದೆ.

ಹೈಕೋರ್ಟ್ ಈ ಕಾನೂನು ಚೌಕಟ್ಟನ್ನು ಮೀರಿ ಸಂಪೂರ್ಣ ನಿಷೇಧ ಹೇರಿರುವುದು ಕಾನೂನು ವ್ಯಾಪ್ತಿಯನ್ನು ಮೀರಿದ ಕ್ರಮ ಎಂದು ಸರ್ಕಾರ ಹೇಳಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಮಕ್ಕಳ್ ಕಚ್ಚಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸೂರ್ಯ, ಅದನ್ನು ತಡೆಯುವಂತೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಭಾರತ ಸಂವಿಧಾನದ ವಿಧಿ 48ನ್ನು ಉಲ್ಲೇಖಿಸಿದ್ದ ಹೈಕೋರ್ಟ್, ಹಸು, ಕರು ಹಾಗೂ ಹಾಲು ಮತ್ತು ಕೃಷಿಗೆ ಉಪಯುಕ್ತ ಜಾನುವಾರುಗಳ ಹತ್ಯೆಯನ್ನು ತಡೆಯಲು ರಾಜ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿತ್ತು.

ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪುಗಳನ್ನೂ ಉಲ್ಲೇಖಿಸಿತ್ತು. ಬಕ್ರೀದ್ ಸಂದರ್ಭದಲ್ಲಿ ಯಾವುದೇ ಪ್ರಾಣಿಯನ್ನು ಬಲಿ ನೀಡಬಹುದು, ಗೋ ಹತ್ಯೆಯೇ ಮಾಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹಿಂದಿನ ತೀರ್ಪಿನಲ್ಲಿ ಹೇಳಿರುವುದನ್ನು ಹೈಕೋರ್ಟ್ ತಿಳಿಸಿತ್ತು. ಹೈಕೋರ್ಟ್​​ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ.

Related Posts

Leave a Reply

Your email address will not be published. Required fields are marked *