Wednesday, October 14, 2026
Menu

ಎರಡು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ ಯುವಕನ ಭೀಕರ ಹತ್ಯೆ!

ಉದಯಕಾಲ ನ್ಯೂಸ್, ದಾವಣಗೆರೆ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದಿದ್ದ ಯುವಕನೊಬ್ಬನನ್ನು ದುಷ್ಕರ್ಮಿಗಳು ಕಣ್ಣಿಗೆ ಖಾರದಪುಡಿ ಎರಚಿ ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.

ಹೊನ್ನಾಳಿ ಪಟ್ಟಣದ ಹೊಸಕೇರಿ ಏರಿಯಾ ನಿವಾಸಿ ಅಮಿತ್ (27) ಕೊಲೆಯಾದ ದುರ್ದೈವಿ. ಈತ ಹೊನ್ನಾಳಿ ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಗಣೇಶ್ ಎಂಬಾತನೇ ಈ ಕೊಲೆಗೆ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ.

ಸ್ಕೆಚ್ ಹಾಕಿ ಫಿನಿಶ್ ಮಾಡಿದ್ರು!
ಮೃತ ಅಮಿತ್ ಮಂಗಳವಾರ ರಾತ್ರಿ ತನ್ನ ತಾಯಿಯ ಜೊತೆ ಹೊನ್ನಾಳಿ ಪಟ್ಟಣದ ದುರ್ಗಿಗುಡಿಯಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನಕ್ಕೆ ಬಂದಿದ್ದ. ಆ ಸಂದರ್ಭದಲ್ಲಿ ಅಜ್ಞಾತ ದುಷ್ಕರ್ಮಿಗಳು ಏಕಾಏಕಿ ಅಮಿತ್ ಕಣ್ಣಿಗೆ ಖಾರದಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಾಗೂ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಅಮಿತ್‌ನನ್ನು ಕೂಡಲೇ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಆದರೆ, ಮಾರ್ಗಮಧ್ಯದಲ್ಲೇ ಅಮಿತ್ ಮೃತಪಟ್ಟಿದ್ದು, ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಘಟನೆ ನಡೆದ ಬಳಿಕ ಪ್ರಮುಖ ಆರೋಪಿ ಗಣೇಶ್ ಸೇರಿದಂತೆ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಹಳೇ ವೈಷಮ್ಯವೇ ಕಾರಣ

ಹಿಂದೆ ನಡೆದಿದ್ದ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಮಿತ್ ಹಾಗೂ ಗಣೇಶ್ ನಡುವೆ ಗಲಾಟೆ ನಡೆದಿತ್ತು. ಆ ಗಲಾಟೆ ವೇಳೆ ಅಮಿತ್ ಗಣೇಶ್‌ಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದ. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದ ಅಮಿತ್, ಕೇವಲ ಎರಡು ತಿಂಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಇದೀಗ ಅದೇ ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮೃತನ ತಾಯಿ ನಾಗರತ್ನಮ್ಮ ಅವರು ನೀಡಿದ ದೂರಿನ ಮೇರೆಗೆ ಗಣೇಶ್ ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಹೊನ್ನಾಳಿ ಠಾಣೆಯ ಪಿಐ ಸುನೀಲ್ ಕುಮಾರ್, “ಹೊನ್ನಾಳಿಯ ದುರ್ಗಿ ಗುಡಿಯಲ್ಲಿ ಅಮಿತ್ ಎಂಬ ಯುವಕನ ಕೊಲೆಯಾಗಿದ್ದು, ಮೃತನ ತಾಯಿ ಆರು ಜನರ ವಿರುದ್ಧ ದೂರು ದಾಖಲಿಸಿದ್ದಾರೆ. ಮೇಲ್ನೋಟಕ್ಕೆ ವಿವಾಹೇತರ ಸಂಬಂಧದ ಶಂಕೆಯೂ ಇದೆ ಎನ್ನಲಾಗುತ್ತಿದ್ದು, ಸಂಪೂರ್ಣ ತನಿಖೆಯ ಬಳಿಕವಷ್ಟೇ ನಿಖರ ಕಾರಣ ತಿಳಿದುಬರಲಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಹುಡುಕಾಟ ಮುಂದುವರಿಸಲಾಗಿದೆ” ಎಂದು ತಿಳಿಸಿದ್ದಾರೆ.
#DavanagereNews #HonnaliCrime #YouthMurder #KarnatakaPolice #PersonalEnmity #CrimeNewsKannada #UdayakalaNews #DavangereUpdates

Related Posts

Leave a Reply

Your email address will not be published. Required fields are marked *