Thursday, October 15, 2026
Menu

ಜರ್ಮನಿಯ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಅಗ್ನಿ ದುರಂತ: ಮೂವರು ಭಾರತೀಯರು ಸಜೀವ ದಹನ, ರೊಮೇನಿಯನ್ ಪ್ರಜೆ ಬಂಧನ!

ಬರ್ಲಿನ್: ಪಶ್ಚಿಮ ಜರ್ಮನಿಯ ಬೋಚುಮ್ ನಗರದ ಬಹುಮಹಡಿ ವಸತಿ ಸಮುಚ್ಚಯವೊಂದರಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಮೂವರು ಭಾರತೀಯ ಪ್ರಜೆಗಳು ದುರ್ಮರಣಕ್ಕೀಡಾಗಿದ್ದಾರೆ. ಬೆಂಕಿಯಿಂದ ಉಂಟಾದ ದಟ್ಟ ಹೊಗೆಯನ್ನು ಉಸಿರಾಡಿ ತೀವ್ರ ಅಸ್ವಸ್ಥಗೊಂಡ ಇತರ ಐವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘೋರ ದುರಂತಕ್ಕೆ ಸಂಬಂಧಿಸಿದಂತೆ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯನ್ ಪ್ರಜೆಯನ್ನು ಪೊಲೀಸರು ಕೊಲೆ ಹಾಗೂ ದುರುದ್ದೇಶಪೂರ್ವಕ ಬೆಂಕಿ ಹಚ್ಚಿದ ಶಂಕೆಯ ಮೇಲೆ ಬಂಧಿಸಿದ್ದಾರೆ.

ಮೃತರನ್ನು 25 ಮತ್ತು 27 ವರ್ಷ ವಯಸ್ಸಿನ ಇಬ್ಬರು ಯುವತಿಯರು ಹಾಗೂ 26 ವರ್ಷದ ಓರ್ವ ಯುವಕ ಎಂದು ಜರ್ಮನಿಯ ಸಾರ್ವಜನಿಕ ಪ್ರಸಾರ ಸಂಸ್ಥೆ ‘ಡಬ್ಲ್ಯೂಡಿಆರ್’ ವರದಿ ಮಾಡಿದೆ. ವರದಿಗಳ ಪ್ರಕಾರ ಮೃತರು ಕೇರಳ ಮೂಲದವರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಆದರೆ, ಜರ್ಮನ್ ಪೊಲೀಸರು ಅಧಿಕೃತವಾಗಿ ಮೃತರ ಹೆಸರು ಹಾಗೂ ನಿಖರವಾದ ರಾಜ್ಯಗಳ ವಿವರಗಳನ್ನು ಇನ್ನು ಬಹಿರಂಗಪಡಿಸಿಲ್ಲ.

ಘಟನೆಯ ವಿವರ

ಸ್ಥಳೀಯ ಕಾಲಮಾನ ಮಂಗಳವಾರ ಮುಂಜಾನೆ ಸುಮಾರು 4:15ರ ಸುಮಾರಿಗೆ ಬೋಚುಮ್‌ನ ಹಾಫ್‌ಸ್ಟೆಡ್ ಜಿಲ್ಲೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಮೆಟ್ಟಿಲುಗಳ ಮಾರ್ಗದಲ್ಲೇ ಬೆಂಕಿಯ ಕೆನ್ನಾಲಿಗೆ ಮತ್ತು ದಟ್ಟ ಹೊಗೆ ವೇಗವಾಗಿ ಮೇಲ್ಮುಖವಾಗಿ ವ್ಯಾಪಿಸಿದ್ದರಿಂದ, ಮೇಲಿನ ಮಹಡಿಗಳಲ್ಲಿದ್ದ ನಿವಾಸಿಗಳನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳನ್ನು ಬಳಸಲು ಸವಾಲಾಗಿ ಪರಿಣಮಿಸಿತು. ಅಂತಿಮವಾಗಿ ರಕ್ಷಣಾ ಸಿಬ್ಬಂದಿ ವಿಶೇಷ ಟರ್ನ್‌ಟೇಬಲ್ ಏಣಿಗಳು ಮತ್ತು ಸುರಕ್ಷತಾ ಜಂಪಿಂಗ್ ಕುಷನ್‌ಗಳನ್ನು ಬಳಸಿ ಸಿಲುಕಿದ್ದ ಹಲವರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಆದರೆ, ಎರಡನೇ ಮಹಡಿಯ ಅಪಾರ್ಟ್‌ಮೆಂಟ್ ಪ್ರವೇಶಿಸಿದಾಗ ಮೂವರು ಭಾರತೀಯರು ಅಷ್ಟೊತ್ತಿಗೆ ಮೃತಪಟ್ಟಿರುವುದು ಕಂಡುಬಂದಿದೆ.

ಉದ್ದೇಶಪೂರ್ವಕ ಕೃತ್ಯ

ಪ್ರಾಥಮಿಕ ತನಿಖೆಯಲ್ಲಿ ಯಾವುದೇ ತಾಂತ್ರಿಕ ದೋಷ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದ್ದು, ಉದ್ದೇಶಪೂರ್ವಕವಾಗಿಯೇ ಬೆಂಕಿ ಹಚ್ಚಲಾಗಿದೆ ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲೇ ವಶಕ್ಕೆ ಪಡೆಯಲಾದ 41 ವರ್ಷದ ರೊಮೇನಿಯನ್ ವ್ಯಕ್ತಿಯನ್ನು ಹೋಮಿಸೈಡ್ ಸ್ಕ್ವಾಡ್‌ನ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದು, ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜರ್ಮನ್ ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳು ಈ ಕುರಿತು ಸಮಗ್ರ ತನಿಖೆ ಮುಂದುವರಿಸಿದ್ದಾರೆ. ಭಾರತೀಯ ದೂತಾವಾಸವು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಮೃತದೇಹಗಳನ್ನು ಭಾರತಕ್ಕೆ ತರುವ ಕುರಿತು ಪರಿಶೀಲನೆ ನಡೆಸುತ್ತಿದೆ.
#GermanyFire #Bochum #IndianNationals #Udayakala #CrimeNews #WorldNews #ArsonCase

Related Posts

Leave a Reply

Your email address will not be published. Required fields are marked *