ಉದಯಕಾಲ ನ್ಯೂಸ್, ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸಿಸಿಬಿ (CCB) ಸೈಬರ್ ಕ್ರೈಮ್ ಪೊಲೀಸರು ಚುರುಕುಗೊಳಿಸಿದ್ದು, ದೆಹಲಿಯಲ್ಲಿ ಪ್ರಮುಖ ಆರೋಪಿಯೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಪ್ರಮುಖ ಆರೋಪಿ ಬಂಧನ ಹಾಗೂ ತಾಂತ್ರಿಕ ಸಾಕ್ಷ್ಯಗಳ ವಶ
ರಿತೇಶ್ ಪಾಂಡೆ ಎಂದು ಗುರುತಿಸಲಾದ ಪ್ರಮುಖ ಆರೋಪಿಯನ್ನು ದೆಹಲಿಯಲ್ಲಿ ವಶಕ್ಕೆ ಪಡೆದ ಸಿಸಿಬಿ ಪೊಲೀಸರು, ತಕ್ಷಣವೇ ಬೆಂಗಳೂರಿಗೆ ಕರೆತಂದಿದ್ದಾರೆ. ಸದ್ಯ ಈ ಆರೋಪಿಯನ್ನು ರಹಸ್ಯ ಸ್ಥಳದಲ್ಲಿ ಇರಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದೆ.ವಿವಾದಾತ್ಮಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲು ಬಳಸಲಾಗಿದ್ದ ಮೊಬೈಲ್ ಫೋನ್ ಅನ್ನು ರಿತೇಶ್ ಪಾಂಡೆ ಹೆಸರಿನಲ್ಲೇ ಖರೀದಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಬಂಧಿತ ಆರೋಪಿಯಿಂದ ಮೊಬೈಲ್ ಫೋನ್ ಹಾಗೂ ಪ್ರಮುಖ ತಾಂತ್ರಿಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸ್ಟಿಂಗ್ ಆಪರೇಷನ್ ಹಿಂದೆ ಇರುವ ಬೃಹಸ್ಪತಿಗಳು ಯಾರು ಮತ್ತು ಇದರ ಹಿಂದಿನ ದೊಡ್ಡ ಷಡ್ಯಂತ್ರವೇನು ಎಂಬುದರ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ವ್ಯಕ್ತಿಗಳು ಕಾನೂನಿನ ಬಲೆಗೆ ಬೀಳುವ ಸಾಧ್ಯತೆಯಿದೆ.
ಪಾರದರ್ಶಕ ತನಿಖೆಗೆ ಸಿದ್ದರಾಮಯ್ಯ ಆಗ್ರಹ
ಈ ಸ್ಟಿಂಗ್ ಆಪರೇಷನ್ ಕುರಿತು ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿದ್ದರಾಮಯ್ಯ, ಇದು ಸಂಪೂರ್ಣ ಸುಳ್ಳು ಮತ್ತು ಬ್ಲ್ಯಾಕ್ಮೇಲ್ ಕೇಸ್ ಎಂದು ಕಿಡಿಕಾರಿದ್ದರು.”ಸತ್ಯ ಹೊರಗಡೆ ಬರಲಿ ಎಂದು ನಾನೇ ದೂರು ಕೊಟ್ಟಿದ್ದೇನೆ. ಹೆಚ್ಚಿನ ಪ್ರಸಾರ ಬೇಡ ಎಂದು ಸಿವಿಲ್ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದೇನೆ. ತನಿಖೆ ಸಂಪೂರ್ಣ ಪಾರದರ್ಶಕವಾಗಿ ಆಗಬೇಕು ಎಂದು ಅವರು ಆಗ್ರಹಿಸಿದ್ದರು. “ಇದರಲ್ಲಿ ಮಂಗಳೂರಿನ ಕೃಪಾ ಆಳ್ವ ಹಾಗೂ ರಾಕೇಶ್ ಶೆಟ್ಟಿ ಪಾತ್ರವಿದೆ. ರಾಕೇಶ್ ಶೆಟ್ಟಿಯೇ ನಾನೇ ಸ್ಟಿಂಗ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು.
#StingVideoCase #Siddaramaiah #CCBBengaluru #RiteshPandey #UdayakalaNews #KarnatakaPolitics #CyberCrime #BengaluruNews #PoliticalControversy

