ಕೇಟರಿಂಗ್ ಕಂಪನಿಯೊಂದಕ್ಕೆ ರೂ 3.38 ಕೋಟಿಯನ್ನು ನಿಯಮಬಾಹಿರವಾಗಿ ಪಾವತಿಸಿರುವ ಆರೋಪದ ಮೇಲೆ ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಪ್ರತಿಷ್ಠಿತ ಬೌರಿಂಗ್ ಇನ್ ಸ್ಟಿಟ್ಯೂಟ್ ನ (ಬೌರಿಂಗ್ಸ್ ಕ್ಲಬ್) ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಶ್ರೀಕಾಂತ್ ಅವರ ಸದಸ್ಯತ್ವವನ್ನು ಆರು ತಿಂಗಳ ಅವಧಿಗೆ ಅಮಾನತುಗೊಳಿಸಲಾಗಿದೆ.
ಜುಲೈ 15ರಂದು ನಡೆದ ಆಡಳಿತ ಮಂಡಳಿಯ ವಿಶೇಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಅಮಾನತು ತಕ್ಷಣದಿಂದಲೇ ಜಾರಿಗೆ ಬಂದಿರುತ್ತದೆ ಎಂದು ಗೌರವ ಕಾರ್ಯದರ್ಶಿ ಭರತ್ ಪೂವಯ್ಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತ ತನಿಖೆಗಾಗಿ ಐವರು ಸದಸ್ಯರ ಶಿಸ್ತು ಸಮಿತಿಯನ್ನೂ ರಚಿಸಲಾಗಿದೆ. ಶಿಸ್ತು ಸಮಿತಿಯ ವರದಿಯನ್ನು ಆಧರಿಸಿ ಅಗತ್ಯವುಂಟಾದರೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಕ್ಲಬ್ ನ ವ್ಯವಹಾರಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಮೆಸರ್ಸ್ ಶುಭಂ ಕೇಟರರ್ಸ್ ಗೆ ರೂ 3.38 ಕೋಟಿ ಹಣವನ್ನು ಅನಧಿಕೃತವಾಗಿ ನೀಡಿರುವ ಬಗ್ಗೆವಿವರಣೆ ಕೋರಿ ಶ್ರೀಕಾಂತ್ ಅವರಿಗೆ ಷೋಕಾಸ್ ನೋಟಿಸ್ ನೀಡಲಾಗಿತ್ತು. ಅದಕ್ಕೆ ನೀಡಿರುವ ವಿವರಣೆ ಸಮರ್ಥನೀಯವಾಗಿಲ್ಲ. ರೂ 3.38 ಕೋಟಿ ಮುಂಗಡ ಪಾವತಿಯು ಕ್ಲಬ್ ನ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿಶೇಷ ಸಭೆಯು ಅಭಿಪ್ರಾಯಪಟ್ಟಿರುತ್ತದೆ.
ಈ ಅಕ್ರಮ ಮುಂಗಡ ಪಾವತಿಯಿಂದಾಗಿ ಬೌರಿಂಗ್ ಇನ್ ಸ್ಟಿಟ್ಯೂಟ್ ಗೆ ಆರ್ಥಿಕ ನಷ್ಟವುಂಟಾಗಿದೆ. ಇದನ್ನು ಪರಿಗಣಿಸಿ, ಇನ್ ಸ್ಟಿಟ್ಯೂಟ್ ನ ನಿಯಮ 24.(1) (2) ಮತ್ತು 24.(3)ರ ಅನುಸಾರ ಈ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ವಿವರಿಸಲಾಗಿದೆ.
ಟೆಂಡರ್ ಕರೆಯದೆ ಕಟ್ಟಡ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ತಮಗೆ ಬೇಕಾದವರಿಗೆ ನೀಡಿರುವುದು, ಆಂಧ್ರಪ್ರದೇಶದ ಗಡಿ ಭಾಗವಾದ ಬಾಗೇಪಲ್ಲಿಯ ಪರಗೋಡು ಬಳಿ ಎರಡನೇ ಬೌರಿಂಗ್ಸ್ ಕ್ಲಬ್ ನಿರ್ಮಾಣಕ್ಕಾಗಿ ಮಾರುಕಟ್ಟೆ ದರಕ್ಕಿಂತ ದುಬಾರಿ ದರದಲ್ಲಿ ಭೂಮಿ ಖರೀದಿಸಿರುವುದು ಮತ್ತಿತರ ಆರೋಪಗಳೂ ಇವರ ಮೇಲಿವೆ.
ಕ್ಲಬ್ ಗೆ ಸಂಬಂಧಿಸಿದ ಹಲವಾರು ಕಡತಗಳನ್ನು ಅಕ್ರಮವಾಗಿ ಕೊಂಡೊಯ್ದಿರುವ ಬಗ್ಗೆ ಇವರ ವಿರುದ್ಧ ಆಂತರಿಕ ತನಿಖೆ ಆರಂಭವಾಗಿದೆ. ಪ್ರತಿ ಸದಸ್ಯತ್ವಕ್ಕೆ ರೂ 23.60 ಲಕ್ಷದಂತೆ ನಗದು ಪಡೆದು ನೂರಾರು ಜನರಿಗೆ ಸದಸ್ಯತ್ವ ನೀಡಿ, ಆದರೆ ಆ ಹಣವನ್ನು ಕ್ಲಬ್ ಗೆ ಸಂದಾಯ ಮಾಡಿಲ್ಲವೆಂಬ ಆರೋಪವಿದೆ. ಕಾನೂನುಬಾಹಿರವಾಗಿ ನೂರಾರು ಸರ್ವೀಸ್ ಮೆಂಬರ್ ಶಿಪ್ ಗಳನ್ನು ನೀಡಿದ್ದು, ಐಎಎಸ್, ಐಪಿಎಸ್, ಐಎಫ್ಎಸ್, ಐಆರ್ ಎಸ್ ಅಧಿಕಾರಿಗಳಿಂದಲೂ ಹಣ ಪಡೆದು ಕ್ಲಬ್ಬಿಗೆ ಪಾವತಿಸದೆ ಸದಸ್ಯತ್ವ ನೀಡಿರುವ ದೂರುಗಳಿವೆ.
ವ್ಯವಹಾರದ ಜವಾಬ್ದಾರಿ ನಿರ್ವಹಿಸುತ್ತಿದ್ದ ಅವಧಿಯಲ್ಲಿ ನೂರಾರು ಕೋಟಿ ಮೊತ್ತದ ಹಗರಣವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದು ಆಂತರಿಕ ಲೆಕ್ಕ ಪರಿಶೋಧನೆ ನಡೆಯುತ್ತಿದೆ. ಪ್ರತಿಷ್ಠಿತ ವ್ಯಕ್ತಿಗಳು ಸೇರಿದಂತೆ ನೂರಾರು ಜನರಿಗೆ ನಕಲಿ ಸದಸ್ಯತ್ವ ನೀಡಿರುವ ಬಗ್ಗೆ ತನಿಖೆ ನಡೆಯುತ್ತಿದೆ .ಪ್ರಧಾನ ಮಂತ್ರಿಗಳ ಕಾರ್ಯಾಲಯ, ಮುಖ್ಯಮಂತ್ರಿಗಳ ಕಾರ್ಯಾಲಯ, ಸಹಕಾರ ಇಲಾಖೆ ನಿಬಂಧಕರು ,ಇ.ಡಿ. ಮತ್ತಿತರ ಸಂಸ್ಥೆಗಳು ಕೂಡ ಇವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ವ್ಯಾಪ್ತಿಯ ಅಧಿಕಾರಿಗಳಿಗೆ ಸೂಚಿಸಿವೆ.


