ಡಿಕೆ ಶಿವಕುಮಾರ್ ಸಿಎಂ ಆದ ಕೂಡಲೇ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಆರಂಭವಾಗಿದೆ. ಮೂರು ರಾಜ್ಯಗಳ ಚುನಾವಣೆಗೆ ಬಿಡದಿ ಟೌನ್‌ಶಿಪ್ ಯೋಜನೆ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಡಿಕೆ ಶಿವಕುಮಾರ್ ಸಿಎಂ ಆದ ಕೂಡಲೇ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಆರಂಭವಾಗಿದೆ. 30 ದಿನಗಳಲ್ಲಿ ಒಂದೇ ಒಂದು ನೀರಾವರಿ ಯೋಜನೆ ಬರಲಿಲ್ಲ, ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸಲಿಲ್ಲ, ರೈತರಿಗೆ ಬರ ಪರಿಹಾರ ನೀಡಲಿಲ್ಲ. ರಾಷ್ಟ್ರೀಯ ವಿಪತ್ತು ಘೋಷಣೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಕಂದಾಯ ಸಚಿವರು ಒತ್ತಾಯಿಸಿದ್ದು, ಈ ಮೂಲಕ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ರೈತರ ಪಾಲಿಗೆ ಈ ಸರ್ಕಾರವೇ ಒಂದು ವಿಪತ್ತಾಗಿದೆ ಎಂದರು.
ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ಬಿಜೆಪಿ, ಜೆಡಿಎಸ್‌ನ ಯಾವುದೇ ಪಾತ್ರವಿಲ್ಲ. ಬಿಜೆಪಿಯಿಂದ ಯಾವುದೇ ಭೂ ಸ್ವಾಧೀನ ನಡೆದಿಲ್ಲ. ಡಿ.ವಿ.ಸದಾನಂದಗೌಡರು ಸಿಎಂ ಆಗಿದ್ದಾಗ, ಹೊಸ ಸ್ವಾಧೀನ ಕಾಯ್ದೆ ಬಂದಿರುವುದರಿಂದ ಸ್ವಾಧೀನ ಮಾಡಬೇಕಿಲ್ಲ ಎಂದಿದ್ದರು. ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗಲೂ ಆ ಬಗ್ಗೆ ಪ್ರಯತ್ನ ನಡೆಯಲಿಲ್ಲ. ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಈ ಯೋಜನೆ ಮಾಡುವುದಿಲ್ಲ ಎಂದೇ ಹೇಳಿದ್ದರು. ನಾನು ಕಂದಾಯ ಸಚಿವನಾಗಿದ್ದಾಗ ಯಾವುದೇ ಭೂ ಸ್ವಾಧೀನಕ್ಕೆ ಸಹಿ ಹಾಕಲಿಲ್ಲ. ಆದ್ದರಿಂದಲೇ ನಾವು ಧೈರ್ಯವಾಗಿ ಬಿಡದಿ ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಎಚ್.ಡಿ.ಕುಮಾರಸ್ವಾಮಿಯವರು ಸ್ವಾಧೀನ ಮಾಡಲಿಲ್ಲ, ಬದಲಾಗಿ ಕೇವಲ ನಡಾವಳಿ ಸಭೆ ಮಾಡಿದ್ದರು. ಹಾಗೆಯೇ ಈ ಯೋಜನೆ ಜಾರಿ ಮಾಡುವುದಿಲ್ಲ ಎಂದು ಅವರು ಅಧಿವೇಶನದಲ್ಲಿ ಪ್ರಕಟಿಸಿದ್ದರು. ಆದರೂ ಕುಮಾರಸ್ವಾಮಿ ಮೇಲೆ ಆರೋಪ ಮಾಡಲಾಗುತ್ತಿದೆ. 2024 ರಲ್ಲಿ ಸಿದ್ದರಾಮಯ್ಯ ಆಗಿದ್ದಾಗ ಮೊದಲ ಎರಡು ನೋಟಿಸ್‌ಗಳು ಜಾರಿಯಾಗಿತ್ತು. ಈಗ ಸಿಎಂ ಡಿ.ಕೆ.ಶಿವಕುಮಾರ್ ಅದನ್ನು ಮುಂದುವರಿಸಿದ್ದಾರೆ. ಈ ಯೋಜನೆ ಕುಮಾರಸ್ವಾಮಿಯವರ ಕೂಸಾಗಿದ್ದಾರೆ, ಆ ಕೂಸನ್ನು ಕಾಂಗ್ರೆಸ್ ಏಕೆ ಇಟ್ಟುಕೊಂಡಿದೆ? ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ನಿಯಮ 69 ರಡಿ ಚರ್ಚೆಯಾದಾಗ, ಬಿಡದಿ ಟೌನ್‌ಶಿಪ್ ಯೋಜನೆಯ ವಿರುದ್ಧ ಮಾತಾಡಿದ್ದರು. ರೈತರನ್ನು ನಿರ್ಗತಿಕರನ್ನಾಗಿ ಮಾಡಬಾರದು, ಇದು ತರಕಾರಿ ಬೆಳೆಯುವ ಫಲವತ್ತಾದ ಭೂಮಿಯಾಗಿದ್ದು, ಸಣ್ಣ ರೈತರು ಇಲ್ಲಿ ಕೃಷಿ ಮಾಡುತ್ತಿದ್ದಾರೆ. ಇದನ್ನು ಸ್ವಾಧೀನ ಮಾಡಿದರೆ ರೈತರಿಗೆ ಅನ್ಯಾಯವಾಗುತ್ತದೆ ಎಂದು ಅವರು ಹೇಳಿದ್ದರು. 2017-18 ರಲ್ಲಿ ಒಬ್ಬ ಶಾಸಕರು ಪ್ರಶ್ನೆ ಮಾಡಿದಾಗ, ಆಗಿನ ಡಿಸಿಎಂ ಡಾ.ಜಿ.ಪರಮೇಶ್ವರ್, ಸರ್ಕಾರದಿಂದ ಸ್ವಾಧೀನ ಮಾಡಿಯೇ ಇಲ್ಲ ಎಂದು ಉತ್ತರ ನೀಡಿದ್ದರು. ಈಗ ಅವರು ಮಾತಾಡುತ್ತಿಲ್ಲ. ನಾನು ಬಿಡದಿಗೆ ಭೇಟಿ ನೀಡಿ, ರೈತರಿಗೆ ಸಾಂತ್ವನ ಹೇಳಿದ್ದೇನೆ. ರೈತರನ್ನು ಬಂಧಿಸಿದರೆ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದೇವೆ. ರೈತರ ವಿರುದ್ಧ ಕೊಲೆ ಬೆದರಿಕೆ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ರೈತರ ವಿರುದ್ಧ ಸುಳ್ಳು ಕೇಸುಗಳನ್ನು ಹಾಕಿರುವ ಸರ್ಕಾರ, ರೈತರ ಪರ ಎಂದು ಹೇಳುವ ನೈತಿಕತೆ ಕಳೆದುಕೊಂಡಿದೆ ಎಂದರು.
ಬಿಡದಿಯ ರೈತರು ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿದ್ದಾರೆ. ಬೈರಮಂಗಲದಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ಮೂರು ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸಲಾಗುತ್ತಿದೆ. ಒಂದು ಎಕರೆಗೆ ನಾಲ್ಕೈದು ಕೋಟಿ ರೂ. ಕಮಿಶನ್ ಸಿಗಲಿದೆ. ಹಿಂದೆ 2750 ಎಕರೆ ಸರ್ಕಾರಿ ಭೂಮಿ ಇದ್ದು, ಈಗ ಕೇವಲ 700 ಎಕರೆ ಉಳಿದಿದೆ. 2,000 ಎಕರೆ ಜಾಗವನ್ನು ಯಾರೋ ಬೇರೆಯವರು ಪಡೆದಿದ್ದಾರೆ. ಸರ್ಕಾರದ ಹಣ ಲೂಟಿ ಮಾಡಲು ಅಂತಹವರಿಗೆ ಅನುಕೂಲ ಮಾಡಿಕೊಡಲಾಗಿದೆ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದ್ದೇವೆ ಎಂದರು.
ಇದು ಕೇವಲ ಬಿಡದಿಯ ರೈತರ ಹೋರಾಟವಲ್ಲ. ಇಡೀ ರಾಜ್ಯದ ರೈತರ ಹೋರಾಟವಾಗಿದ್ದು, ಎಲ್ಲ ರೈತ ಸಂಘಟನೆಗಳು ಬೆಂಬಲ ನೀಡಬೇಕು. ಆನೇಕಲ್‌ನಲ್ಲೂ ಇದೇ ರೀತಿಯ ಹೋರಾಟ ನಡೆಯುತ್ತಿದೆ. ಈ ಯೋಜನೆ ಕೈ ಬಿಡುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಹೇಳಿದರು.


