2013ರಲ್ಲಿ ದೇಶಾದ್ಯಂತ ಸದ್ದು ಮಾಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತೆಹಲ್ಕಾ ನಿಯಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್ಪಾಲ್ ದೋಷಿ ಎಂದು ಬಾಂಬೆ ಹೈಕೋರ್ಟ್ನ ಗೋವಾ ಪೀಠವು ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮಸಂಡೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗೋವಾ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಬಳಿಕ ಈ ತೀರ್ಪು ಪ್ರಕಟಿಸಿದೆ.
ವಿಚಾರಣಾ ನ್ಯಾಯಾಲಯ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯ ಆರೋಪಿಗೆ ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. 2013 ರ ನವೆಂಬರ್ನಲ್ಲಿ ಗೋವಾದ ಪಂಚತಾರಾ ಹೋಟೆಲ್ವೊಂದರಲ್ಲಿ ನಡೆದ ‘ಥಿಂಕ್ಫೆಸ್ಟ್’ ಸಂದರ್ಭ, ಲಿಫ್ಟ್ನಲ್ಲಿ ತಮ್ಮ ಮೇಲೆ ತೇಜ್ಪಾಲ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಕಿರಿಯ ಮಹಿಳಾ ಸಹೋದ್ಯೋಗಿ ಆರೋಪಿಸಿದ್ದರು. 2021 ರಲ್ಲಿ ಮಾಪುಸಾದ ಸೇಷನ್ಸ್ ನ್ಯಾಯಾಲಯವು ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ತೀರ್ಪು ಪ್ರಕಟಿಸುವ ಸಮಯದಲ್ಲಿ ತೇಜ್ಪಾಲ್ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದರು.ಶಿಕ್ಷೆಯ ಪ್ರಮಾಣ ನಿಗದಿಗೂ ಮುನ್ನ ಲಘು ಶಿಕ್ಷೆ ವಿಧಿಸುವಂತೆ ಕೋರಿದ ಅವರು, ನನಗೆ ಈಗ 62 ವರ್ಷ. ನಾನೇ ಈ ಪ್ರಕರಣದಲ್ಲಿ ಸಂತ್ರಸ್ತ ಎಂದು ಭಾವಿಸುತ್ತೇನೆ. ನನಗೆ ಹೆಂಡತಿ ಇದ್ದಾಳೆ. ನಾವೀಗ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು. ನನ್ನ ವಯಸ್ಸನ್ನು ಪರಿಗಣಿಸಿ ರಿಯಾಯಿತಿ ನೀಡಿ ಎಂದು ಪೀಠಕ್ಕೆ ಮನವಿ ಮಾಡಿದರು.
ತೇಜ್ಪಾಲ್ ಪರ ಹಿರಿಯ ವಕೀಲ ಆಬಾದ್ ಪೋಂಡಾ , ಘಟನೆ ನಡೆದು 13 ವರ್ಷ ಕಳೆದಿವೆ ಮತ್ತು ತೇಜ್ಪಾಲ್ ವಿರುದ್ಧ ಬೇರೆ ಯಾವುದೇ ಎಫ್ಐಆರ್ ಇಲ್ಲ. ಶಿಕ್ಷೆಯ ಅವಧಿಯಲ್ಲಿ ಸಡಿಲಿಕೆ ನೀಡಬೇಕು ಹಾಗೂ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ತೀರ್ಪಿಗೆ ಎಂಟು ವಾರ ತಡೆ ನೀಡಬೇಕು ಎಂದು ಕೇಳಿಕೊಂಡರು.
ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದನ್ನು ಬಲವಾಗಿ ವಿರೋಧಿಸಿದರು. ಮಗಳ ಸಮಾನವಾದ ಯುವತಿಯ ಮೇಲೆ ತೇಜ್ಪಾಲ್ ಈ ಕೃತ್ಯ ಎಸಗಿದ್ದಾರೆ. . ಸಂತ್ರಸ್ತೆ ನಿರಾಕರಿಸಿದರೂ ಅವರು ಕಿರುಕುಳ ಮುಂದುವರಿಸಿದ್ದರು. ಸಮಾಜಕ್ಕೆ ಸಂದೇಶ ಸಾರಲು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಸಮರ್ಥಿಸಿದರು.


