Wednesday, November 04, 2026
Menu

ಕಬ್ಬಿನ ಕಗ್ಗಂಟು ಬಗೆಹರಿಸಲು ಸತೀಶ ಜಾರಕಿಹೊಳಿ ಸಭೆ ವಿಫಲ: ಇಂದು ಮತ್ತೊಂದು ಸುತ್ತಿನ ಮಾತುಕತೆ

ಉದಯಕಾಲ ನ್ಯೂಸ್,ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿ ಕುರಿತು ಉಂಟಾಗಿರುವ ಕಗ್ಗಂಟನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ನಡೆಸಿದ ಎರಡು ಸುತ್ತಿನ ಸಭೆಗಳು ಯಾವುದೇ ಒಮ್ಮತದ ನಿರ್ಧಾರವಿಲ್ಲದೆ ವಿಫಲಗೊಂಡಿವೆ. ಸಕ್ಕರೆ ಕಾರ್ಖಾನೆಗಳು ಮತ್ತು ರೈತ ಮುಖಂಡರ ನಡುವಿನ ಬೇಡಿಕೆಗಳಲ್ಲಿ ದೊಡ್ಡ ಮಟ್ಟದ ಅಂತರವಿರುವುದೇ ಈ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾತ್ರಿ 10 ಗಂಟೆವರೆಗೂ ಸಚಿವರು ಸಭೆ ನಡೆಸಿದರು. ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಮೊದಲ ಕಂತಿನಲ್ಲಿ 3,500 ರೂ. ನೀಡುವುದಾಗಿ ಹಾಗೂ ಸಕ್ಕರೆ ದರ ಕೆಜಿಗೆ 50 ರೂ. ಹೆಚ್ಚಿದರೆ ಎರಡನೇ ಕಂತಿನಲ್ಲಿ 500 ರೂ. ನೀಡುವುದಾಗಿ ತಿಳಿಸಿದರು. ಆದರೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಮಾರುಕಟ್ಟೆಯಲ್ಲಿ ಸಕ್ಕರೆ ದರ ಹೆಚ್ಚಿರುವಾಗ ಮೊದಲ ಕಂತಿನಲ್ಲೇ 4,000 ರೂ. ಮತ್ತು 2ನೇ ಕಂತಿನಲ್ಲಿ 500 ರೂ. ಸೇರಿ ಒಟ್ಟು 4,500 ರೂ. ನೀಡಬೇಕು ಹಾಗೂ ರಾಜ್ಯ ಸರ್ಕಾರ 1,000 ರೂ. ಪ್ರೋತ್ಸಾಹಧನ ಘೋಷಿಸಬೇಕು ಎಂದು ಪಟ್ಟು ಹಿಡಿದರು.

ಸಭೆಯಿಂದ ಕೆಲವು ಮುಖಂಡರ ಗೈರು ಹಾಗೂ ಆಕ್ರೋಶ

ಸಭೆಯ ಆರಂಭದಲ್ಲಿ ಕೇವಲ ಕೆಲವೇ ಕೆಲವು ಮುಖಂಡರನ್ನು ಆಹ್ವಾನಿಸಿದ್ದಕ್ಕೆ ರೈತ ಸಂಘಟನೆಗಳ ನಡುವೆ ಗೊಂದಲ ಹಾಗೂ ಅಸಮಾಧಾನ ವ್ಯಕ್ತವಾಯಿತು. ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮತ್ತು ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಸೇರಿದಂತೆ ಕೆಲವರು ಮುಚ್ಚಿದ ಕೋಣೆಯ ಸಭೆಯನ್ನು ಬಹಿಷ್ಕರಿಸಿದರು. ಸಚಿವರು ಮತ್ತು ಕಾರ್ಖಾನೆ ಮಾಲೀಕರು ನೇರವಾಗಿ ಬಡಕುಂದ್ರಿ ಹೋರಾಟದ ವೇದಿಕೆಗೆ ಬಂದು ನಿರ್ಧಾರ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು. ಒಂದು ವೇಳೆ ಬುಧವಾರ ಮಧ್ಯಾಹ್ನದೊಳಗೆ ಸ್ಪಷ್ಟ ನಿರ್ಧಾರ ಬಾರದಿದ್ದರೆ ‘ಜೈಲ್ ಭರೋ’ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟನೆ

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ, ಇಂದಿನ ಸಭೆ ವಿಫಲವೂ ಅಲ್ಲ, ಸಫಲವೂ ಅಲ್ಲ, ಇದು ‘ಫಿಪ್ಟಿ-ಫಿಪ್ಟಿ’ ಸ್ಥಿತಿಯಲ್ಲಿದೆ ಎಂದರು. ರೈತರು ಮತ್ತು ಕಾರ್ಖಾನೆ ಮಾಲೀಕರ ಬೇಡಿಕೆಗಳು ಭಿನ್ನವಾಗಿರುವುದರಿಂದ ದರ ನಿಗದಿ ವಿಳಂಬವಾಗಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಬುಧವಾರ ಮತ್ತೊಮ್ಮೆ ಸಭೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು. ಕಾರ್ಖಾನೆ ಮಾಲೀಕರು ಹಾಗೂ ರೈತರ ನಡುವಿನ ಬೆಲೆ ಅಂತರವನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು.

#SugarcaneIssue #SatishJarkiholi #Belagavi #KarnatakaNews #FarmersProtest #UdayakalaNews #SugarcanePrice

Related Posts

Leave a Reply

Your email address will not be published. Required fields are marked *