Menu

ಸಾರಿಗೆ ನೌಕರರಿಗೆ ಬಾಕಿ ವೇತನದಲ್ಲಿ 170 ಕೋಟಿ ರೂ. ಬಿಡುಗಡೆ: ಸಚಿವ ಬೈರತಿ ಸುರೇಶ್‌

ರಾಜ್ಯ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ  ಬಾಕಿ ಇರುವ ವೇತನದ ಪೈಕಿ 170 ಕೋಟಿ ರೂಪಾಯಿಗಳನ್ನು ಶುಕ್ರವಾರವೇ ಬಿಡುಗಡೆ ಮಾಡಿರುವುದಾಗಿ  ಸಚಿವ ಬೈರತಿ ಸುರೇಶ್‌ ಹೇಳಿದ್ದಾರೆ. ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ ಕೇಂದ್ರ ಕಚೇರಿಯಲ್ಲಿ  15ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರ ಬೇಡಿಕೆಗಳ ಬಗ್ಗೆ  ಸಚಿವರು ಚರ್ಚಿಸಿದರು.

ಸಭೆಯ ನಂತರ ಮಾಹಿತಿ ನೀಡಿದ ಅವರು,  ರಾಜ್ಯ ಸರ್ಕಾರ 2025 ರಲ್ಲಿ ವೇತನ ಪರಿಷ್ಕರಣೆ ಮಾಡಿದ್ದರಿಂದ 1221 ಕೋಟಿ ರೂಪಾಯಿಗಳನ್ನು ನೌಕರರಿಗೆ ಪಾವತಿಸ ಬೇಕಿದ್ದು, ಅದರಲ್ಲಿ 450 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಇನ್ನೂ 821 ಕೋಟಿ ರೂಪಾಯಿಗಳು ಬಾಕಿ ಇದ್ದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ತಕ್ಷಣವೇ 170 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ತಕ್ಷಣವೇ ಈ ಹಣವನ್ನು ಬಿಡುಗಡೆ ಮಾಡಿರುವುದಾಗಿ  ತಿಳಿಸಿದರು.

ಎಲ್ಲ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲಾಗಿದೆ. ಈ ಹಿಂದೆ ಮಾಡಿದ್ದ ವೇತನ ಪರಿಷ್ಕರಣೆಯನ್ನು ಇನ್ನೂ 12 ತಿಂಗಳು ವಿಸ್ತರಿಸ ಬೇಕು, ನಾಲ್ಕು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಮತ್ತು ಹಲವು ವರ್ಷಗಳಿಂದ ಬಾಕಿ ಇರುವ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ನಡೆಸುವುದು ಸೇರಿದಂತೆ ಇನ್ನಿತರೆ ವಿಚಾರಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.

ಈ ಎಲ್ಲಾ ಬೇಡಿಕೆಗಳ ಈಡೇರಿಕೆಗಳ ಬಗ್ಗೆ ತಾವು ಮತ್ತು ಸರ್ಕಾರ ಸಕಾರತ್ಮಕವಾಗಿದೆ. ಆದರೆ ಹಣಕಾಸಿನ ವಿಚಾರವಾಗಿರುವುದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸಚಿವ ಸಂಪುಟದ ಮುಂದಿಟ್ಟು, ನಿರ್ಧಾರ ಕೈಗೊಳ್ಳಲಾಗುವುದು. ವಿಧಾನ ಮಂಡಲ ಅಧಿವೇಶನದ ನಂತರ ಮುಖ್ಯಮಂತ್ರಿಗಳೊಂದಿಗೆ ಸಭೆ ನಿಗದಿ ಮಾಡಿ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗುವುದು ಎಂದರು.

ಕೆ.ಎಸ್.ಆರ್.ಟಿ.ಸಿ ತನ್ನ ಸಿಬ್ಬಂದಿ ಮತ್ತು ನೌಕರರಿಗೆ ಆರೋಗ್ಯ ವಿಮೆಯನ್ನು ಜಾರಿಗೆ ತಂದಿದೆ. ಇದೇ ಮಾದರಿಯಲ್ಲಿ ಬಿ.ಎಂ.ಟಿ.ಸಿ, ಕೆ.ಕೆ.ಆರ್.ಟಿ.ಸಿ, ಎನ್.ಡಬ್ಲ್ಯೂ.ಕೆ.ಆರ್.ಟಿ.ಸಿ ನಿಗಮಗಳ ನೌಕರರಿಗೂ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಪ್ರಕಟಿಸಿದರು. ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ವಾರ್ಷಿಕ 500 ರೂಪಾಯಿ ಪಡೆದು ಬಸ್ ಪಾಸ್ ವಿತರಿಸಲಾಗುತ್ತಿತ್ತು. ಇನ್ನೂ ಮುಂದೆ ಉಚಿತವಾಗಿ ಬಸ್ ಪಾಸ್ ವಿತರಿಸಲು ನಿರ್ಧರಿಸಲಾಗಿದೆ ಎಂದು  ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಈ ಹಿಂದೆ ಪ್ರಯಾಣ ದರ ಹೆಚ್ಚಳ ಮಾಡಿದ ನಂತರ 9 ಕ್ಕೂ ಹೆಚ್ಚು ಬಾರಿ ತೈಲೋತ್ಪನ್ನಗಳ ಬೆಲೆ ಹೆಚ್ಚಳವಾಗಿದೆ.  ಸರ್ಕಾರಿ ಸ್ವಾಮ್ಯದ ಬಸ್ ಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಿಲ್ಲ. ಇದರಿಂದ ನಿಗಮಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದರು. ಹಿರಿಯ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದಲ್ಲಿ ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚಿಸಲಾಗಿದೆ. ಈ ಸಮಿತಿ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲಿದೆ. ಈ ವರದಿಯ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಜನ ಸಾಮಾನ್ಯರಿಗೆ ಹೊರೆ ಆಗದ ರೀತಿ ಪ್ರಯಾಣ ದರ ಹೆಚ್ಚಳ ಮಾಡಲಾಗುತ್ತದೆ ಎಂದು ಎಂದು ಸ್ಪಷ್ಟಪಡಿಸಿದರು.

ಶಕ್ತಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಎಲೆಕ್ಟ್ರಿಕ್ ಬಸ್ ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಪೂರ್ವ ನಿಗದಿಯಂತೆ ಪಿಎಂ ಯೋಜನೆಯಡಿ ಕೇಂದ್ರ ಸರ್ಕಾರದಿಂದ 4500 ಬಸ್ ಗಳನ್ನು ಪಡೆಯಲಾಗುತ್ತದೆ. ಈ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

Related Posts

Leave a Reply

Your email address will not be published. Required fields are marked *