Saturday, October 03, 2026
Menu

ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶ; ಯುವಕನ ದುರ್ಮರಣ

ಪೆಟ್ರೋಲ್ ಬಂಕ್‌ನಲ್ಲಿ ವಿದ್ಯುತ್ ಸ್ಪರ್ಶ; ಯುವಕನ ದುರ್ಮರಣ

ಬೀದರ್: ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಚಂಡಕಾಪುರ ಗ್ರಾಮದ ಬಳಿ ನಡೆದಿದೆ.ಮಂಠಾಳ ಗ್ರಾಮದ ನಿವಾಸಿ ಅಮಿತ್ (19) ಮೃತಪಟ್ಟ ದುರ್ದೈವಿ ಯುವಕ. ಈ ಬಂಕ್‌ ಬಸವಕಲ್ಯಾಣ ನಗರದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿಯ ಅಧ್ಯಕ್ಷ ಅನಿಲ್ ರಗಟೆ ಎಂಬುವವರಿಗೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ.

ಮೃತ ಅಮಿತ್ ಅವರನ್ನು ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸುವ ಕೆಲಸಕ್ಕಾಗಿ ನೇಮಿಸಿಕೊಳ್ಳಲಾಗಿತ್ತು. ಆದರೆ, ಮಾಲೀಕರು ಆತನನ್ನು ಬಂಕ್‌ನ ಕಟ್ಟಡದ ಮೇಲಿದ್ದ ಸೋಲಾರ್ ಫಲಕಗಳನ್ನು (Solar Panels) ತೊಳೆಯುವಂತೆ ಹಚ್ಚಿದ್ದರು. ಈ ವೇಳೆ ತೆರೆದ ವಿದ್ಯುತ್ ಪ್ರವಹಿಸಿ (Electrocution) ಅಮಿತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಮತ್ತು ಸ್ಥಳೀಯರು ತೀವ್ರವಾಗಿ ಆರೋಪಿಸಿದ್ದಾರೆ.

ಕುಟುಂಬಸ್ಥರ ಆಕ್ರೋಶ; ಮಾಲೀಕನ ವಿರುದ್ಧ ಪ್ರತಿಭಟನೆ

ಯುವಕನ ಅಕಾಲಿಕ ಸಾವಿನಿಂದ ಆಕ್ರೋಶಗೊಂಡ ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು, ಬಸವಕಲ್ಯಾಣ ನಗರದ ಪ್ರಮುಖ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಪೆಟ್ರೋಲ್ ಬಂಕ್ ಮಾಲೀಕರ ನಿರ್ಲಕ್ಷ್ಯವೇ ಯುವಕನ ಸಾವಿಗೆ ನೇರ ಕಾರಣವೆಂದು ಆಕ್ರೋಶ ಹೊರಹಾಕಿದ ಅವರು, ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಈ ಸಂಬಂಧ ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಮುಂದುವರಿಸಿದ್ದಾರೆ.

#BidarNews #Basavakalyana #Chandakapura #ElectrocutionDeath #PetrolBunkAccident #KarnatakaNews #Protest #UdayakalaNews

Related Posts

Leave a Reply

Your email address will not be published. Required fields are marked *