Thursday, September 03, 2026
Menu

ಐಪಿಎಸ್‌ ಅಧಿಕಾರಿ ಹೆಸರಿನಲ್ಲಿ ಫೇಸ್ಬುಕ್‌ ಮೂಲಕ ಜನರಿಗೆ ವಂಚನೆ: ರಾಜಸ್ಥಾನದ ಬಾಲಕ ಅರೆಸ್ಟ್‌

ಬೆಂಗಳೂರಿನಲ್ಲಿರುವ ಐಪಿಎಸ್‌ ಅಧಿಕಾರಿಯ ಹೆಸರಿನಲ್ಲಿ ನಕಲಿ ಫೇಸ್ಬುಕ್‌ ಖಾತೆ ಸೃಷ್ಟಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ೧೭ ವರ್ಷದ ರಾಜಸ್ಥಾನದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಐಪಿಎಸ್ ಅಧಿಕಾರಿ ನಾರಾಯಣ ಎಂ ಅವರ ಹೆಸರಿನಲ್ಲಿ ಆರೋಪಿ ನಕಲಿ ಖಾತೆ ಸೃಷ್ಟಿಸಿದ್ದ, ಈತ ರಾಜಸ್ಥಾನದ ಕೊಟಕುರ್ದ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.

ನಾರಾಯಣ ಅವರ ಭಾವಚಿತ್ರ ಬಳಸಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದ ಆರೋಪಿಯು ಪರಿಚಿತರು ಮತ್ತು ಸಾರ್ವಜನಿಕರಿಂದ ಹಣ ವಸೂಲಿಗಿಳಿದಿದ್ದ, ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಆಮಿಷ ಒಡ್ಡುತ್ತಿದ್ದ. ತನ್ನ ಸ್ನೇಹಿತ ಸಿಆರ್‌ಪಿಎಫ್ ಕಮಾಂಡೆಂಟ್ ಆಗಿದ್ದಾನೆ. ಅವನ ಬಳಿ ಪೀಠೋಪಕರಣಗಳು ಮತ್ತು ಗೃಹ ಬಳಕೆಯ ವಸ್ತುಗಳು ಇವೆ. ಅವುಗಳನ್ನು ಕಡಿಮೆ ಬೆಲೆ ಖರೀದಿಸಬಹುದು ಎಂದು ನಂಬಿಸಿ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ. ಈ ಸಂಬಂಧ ಜುಲೈನಲ್ಲಿ ಸಂತ್ರಸ್ತರೊಬ್ಬರು ನೀಡಿದ ದೂರಿನ ಬಳಿಕ ವಂಚನೆ ಪ್ರಕರಣ ಬಹಿರಂಗಗೊಂಡಿತ್ತು.

ಪೊಲೀಸರು ಆರೋಪಿ ಬಾಲಕನಿಂದ ಎರಡು ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಈ ಹಣ ನಕಲಿ ಬ್ಯಾಂಕ್ ಖಾತೆಗಳ ಮೂಲಕ ವಂಚಿಸಿ ಸಂಗ್ರಹಿಸಿರುವುದು ಎಂದು ಶಂಕಿಸಲಾಗಿದೆ. ವಿಚಾರಣೆ ವೇಳೆ ಬಾಲಕ ಕೆಲವು ಸಹಚರರೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ದೇಶದಾದ್ಯಂತ ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ, ಹಣ ವಸೂಲಿ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

Related Posts

Leave a Reply

Your email address will not be published. Required fields are marked *